ಸ್ವಪ್ರತಿಷ್ಠೆ, ಕೆಸರೆರಚಾಟ ಬಿಟ್ಟು ಪಪಂ ಸದಸ್ಯರು ಜವಾಬ್ದಾರಿ ತಿಳಿಯಿರಿ : ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ: ಪಟ್ಟಣದ ಅಭಿವೃದ್ಧಿಗೆ ಬಂದಿರುವ ಕೋಟ್ಯಾಂತರ ರೂಗಳ ವಿಶೇಷ ಅನುದಾನ ಬಳಸಿ ಕೆಲಸ ಮಾಡುವುದು ಹೊರತಾಗಿ ಸ್ವ ಪ್ರತಿಷ್ಠೆ ಮುಂದಿಟ್ಟು ಕೆಲ ಸದಸ್ಯರು ಕೆಲಸಕ್ಕೆ ಅಡ್ಡಿ ಪಡಿಸುವ ಆಲೋಚನೆ ನಡೆಸಿದ್ದಾರೆ. ಒಗ್ಗಟ್ಟಾಗಿ ಹೋದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸಲಹೆ ನೀಡಿದರು.

ಪಟ್ಟಣದ 11 ನೇ ವಾರ್ಡ್ ನಲ್ಲಿ ಸವಿತಾ ಸಮಾಜ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕೆಸರೆರಚಾಟ ಬಿಟ್ಟು ಸದಸ್ಯರ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಇ ಖಾತೆ ಸೇರಿದಂತೆ ಹಲವು ಕೆಲಸ ಸಾಗುತ್ತಿಲ್ಲ. ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭದಲ್ಲೇ ಒಗ್ಗಟ್ಟಾಗಿ ಕೆಲಸ ಮಾಡಲು ಸೂಚಿಸಿದ್ದೆ. ಆದರೆ ಒಬ್ಬರಿಗೊಬ್ಬರು ಹುಳುಕು ಹುಡುಕುತ್ತಿದ್ದಾರೆ. ಈ ಕೆಲಸ ಬಿಟ್ಟು ಒಟ್ಟಾಗಿ ಸಾಗಲು ಹಿರಿಯ ಸದಸ್ಯರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

ಬಗರ್ ಹುಕುಂ ಸಮಿತಿಯ ಸಭೆ ಈ ತಿಂಗಳಲ್ಲಿ ನಡೆಸಲಾಗುವುದು. ಈಗಾಗಲೇ ಸಿದ್ಧಗೊಂಡ ಸುಮಾರು 400 ಕಡತಗಳು ಸಭೆಗೆ ಬರಲಿದೆ. ಖುದ್ದು ತಹಶೀಲ್ದಾರ್ ಅವರೇ ಪರಿಶೀಲಿಸಿದ ಕಡತಗಳು ಮಾತ್ರ ಸಮಿತಿ ಮುಂದೆ ಬರಲಿದೆ ಎಂದ ಅವರು ಭೂ ಹಗರಣ ಮೊದಲ ಪ್ರಕರಣದಲ್ಲಿ ಸುಮಾರು 480 ಮಂದಿಯ ದಾಖಲೆ ಸಿಕ್ಕಿದೆ. ಎರಡನೇ ಹಂತದಲ್ಲಿ 650 ಸಿಕ್ಕಿವೆ. ಮೊದಲ ಪ್ರಕರಣ ಸಿಓಡಿ ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಸಿಸಿ ರಸ್ತೆ ಕಾಮಗಾರಿಗಳು ತಾಲ್ಲೂಕಿನಲ್ಲಿ ನಡೆದಿವೆ. ಅದೇ ರೀತಿ ಪಟ್ಟಣದಲ್ಲಿ ಕೂಡಾ ನಡೆದಿದೆ. ಗುಣಮಟ್ಟ ಪರಿಶೀಲನೆ ಮಧ್ಯಸ್ಥಿಕೆ ಒಂದು ಸಂಸ್ಥೆ ಮಾಡಲಿದೆ. ಪ್ರತಿಷ್ಠಿತ ಎಸ್ ಐಟಿ ಸಂಸ್ಥೆ ಮಾಡಲಿದೆ. ಇಲ್ಲಿ ಕಳಪೆ ಮಾತಿಲ್ಲ. ತರ್ಡ್ ಪಾರ್ಟಿ ಪರಿಶೀಲನೆ ನಂತರವೇ ಬಿಲ್ ಪಾವತಿ ನಡೆಯಲಿದೆ ಎಂದು ಹೇಳಿದ ಆವರು ಅತೀ ಹಿಂದುಳಿದ ವರ್ಗಗಳ ಪೈಕಿ ಸವಿತಾ ಸಮಾಜ ಸಹ ಒಂದು. ಅವರ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಅವರ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 10 ಲಕ್ಷ ನೀಡಲಾಗಿದೆ ಎಂದರು.

ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಿಧಿಯನ್ನು ಬೊಮ್ಮಾಯಿ ಅವರು ನೀಡಿದ್ದಾರೆ. ಒಟ್ಟು 13 ಕೋಟಿ ವೆಚ್ಚ ಗುಣಮಟ್ಟದ ಪರಿಶೀಲನೆ ಖುದ್ದು ಮಾಡಿದ್ದೇನೆ. ಎಲ್ಲಿಯೋ ಕಳಪೆ ಕಾಮಗಾರಿ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದ ಅವರು ಸ್ಥಳೀಯ ಸಂಸ್ಥೆ ಪಟ್ಟಣ ಪಂಚಾಯಿತಿ ಮೂಲಕ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯರಾದ ಜಿ.ಆರ್ ಶಿವಕುಮಾರ್, ಮಹಮದ್ ಸಾದಿಕ್, ಸಿ.ಮೋಹನ್, ಕುಮಾರ್, ಜಿ.ಸಿ.ಕೃಷ್ಣಮೂರ್ತಿ, ರೇಣುಕಾ ಪ್ರಸಾದ್, ಶೋಕತ್ ಆಲಿ, ಬಸವರಾಜು, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಂಜೇಶ್ ಗಾಂಧಿ, ತಾಲ್ಲೂಕು ಅಧ್ಯಕ್ಷ ಜಿ.ಆರ್.ಪ್ರಕಾಶ್, ಕಾರ್ಯದರ್ಶಿ ಜಿ.ಆರ್.ಕಾಂತರಾಜು, ಪ್ರತಿನಿಧಿಗಳಾದ ನಟರಾಜು, ನಾರಾಯಣ್, ಗುತ್ತಿಗೆದಾರ ವಿಶ್ವಣ್ಣ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!