ನೈತಿಕತೆ, ಸ್ವಾಭಿಮಾನವಿದ್ದರೆ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ : ಗುಬ್ಬಿ ಶಾಸಕರಿಗೆ ಹೊನ್ನಗಿರಿಗೌಡ ಸವಾಲ್.

ಗುಬ್ಬಿ: ಕಳೆದ ಇಪ್ಪತ್ತು ವರ್ಷದಿಂದ ಕಾಂಗ್ರೆಸ್ ಮುಖಂಡರನ್ನು ಬ್ಲ್ಯಾಕ್ ಮೇಲ್ ಮಾಡಿಕೊಂಡು ಗೆಲುವು ಸಾಧಿಸಿದ ಗುಬ್ಬಿ ಶಾಸಕರು ಕಾಂಗ್ರೆಸ್ ಬರುತ್ತೇನೆ ಎಂದು ಗೊಂದಲ ಸೃಷ್ಟಿಸುತ್ತಾ ಕಾಲಹರಣ ಮಾಡಿರುವ ಹಿನ್ನಲೆ ತಿಳಿದಿದೆ. ನಿಮ್ಮಲ್ಲಿ ನೈತಿಕತೆ ಸ್ವಾಭಿಮಾನ ಇದ್ದರೆ ಈ ಕ್ಷಣವೇ ರಾಜೀನಾಮೆ ಸಲ್ಲಿಸಿ ನಂತರ ಯಾವ ಪಕ್ಷ ನಿರ್ಧಾರ ಮಾಡಿಕೊಂಡು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ನೇರ ಸವಾಲೆಸೆದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಐಕ್ಯತಾ ಸಮಾವೇಶ ಕುರಿತು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜೀನಾಮೆ ಕೊಡುವುದಾಗಿ ಹೇಳಿ ನವಂಬರ್ ಡಿಸೆಂಬರ್ ಜನವರಿ ಬಂದಿದೆ. ಇನ್ನೂ ರಾಜೀನಾಮೆ ನೀಡಿಲ್ಲ. ಬರೀ ಗೊಂದಲ ಮೂಡಿಸುವ ತಂತ್ರ ಬಳಸಿ ಈಗಾಗಲೇ ಜೆಡಿಎಸ್ ಹಾಳು ಮಾಡಿದ್ದೀರಿ ಈಗ ನಮ್ಮನ್ನು ಹಾಳು ಮಾಡಲಿದ್ದೀರಿ ಎಂದು ಕಿಡಿಕಾರಿದರು.

ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕೆ ಬಂದು ಸಾಮಾನ್ಯ ಕಾರ್ಯಕರ್ತರ ರೀತಿ ದುಡಿದು ನಂತರ ಮುಖಂಡರ ಭೇಟಿ ಮಾಡಿದ್ದರೆ ಒಪ್ಪಬಹುದಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಜಿಲ್ಲಾ ಮುಖಂಡರಲ್ಲಿ ಗೊಂದಲ ಮೂಡಿಸಿ ಕುತಂತ್ರ ನಡೆಸಿ ಇಲ್ಲಿ ಕಾಂಗ್ರೆಸ್ ಮುಖಂಡರ ಭೇಟಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ ಅವರು ಹನ್ನೆರಡು ಸಾವಿರ ಗೂಡು ಎಂದು ಹೇಳಿ ಕಾಂಗ್ರೆಸ್ ಲೇವಡಿ ಮಾಡಿ ಈಗ ಇದೇ ಪಕ್ಷದ ಬಾಗಿಲು ತಟ್ಟಿರುವ ನಿಮ್ಮನ್ನು ಹೇಗೆ ನಂಬುವುದು. ಮೊದಲು ರಾಜೀನಾಮೆ ಕೊಡಿ ನಂತರ ತೀರ್ಮಾನ ಮಾಡಿ ಎಂದು ಕುಟುಕಿದರು.

ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ ಅವರಿಗೆ ಶಕ್ತಿ ತುಂಬುವ ನಾವುಗಳು ಈ ಐಕ್ಯತಾ ಸಮಾವೇಶಕ್ಕೆ ಹೆಚ್ಚಿನ ಒತ್ತು ನೀಡೋಣ. ಈ ಜೊತೆಗೆ ಎಸ್ಸಿ ಎಸ್ಟಿ ಜನಾಂಗವನ್ನು ಕಾಲಿನ ಕಸ ಮಾಡಿಕೊಂಡ ಗುಬ್ಬಿ ಶಾಸಕರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ದಲಿತ ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡು ಕುಕ್ಕರ್ ಹಂಚಿಕೆ ಮೂಲಕ ಆಮಿಷಯೊಡ್ಡಿರುವುದು ಈ ಸಮುದಾಯದ ಸ್ವಾಭಿಮಾನಕ್ಕೆ ದಕ್ಕೆ ತಂದಿರುವ ಜೊತೆಗೆ ನಿಮ್ಮಗಳ ಮತವನ್ನು ಕೊಂಡುಕೊಳ್ಳುವ ಬಗ್ಗೆ ತಿಳಿಸುತ್ತಿದ್ದಾರೆ. ಅಲ್ಲಿನ ಪ್ರಜ್ಞಾವಂತರು ಈ ಬಗ್ಗೆ ತಿಳಿಯಬೇಕು ಎಂದರು.

ಮಾನವೂ ಇಲ್ಲ ಮೌಲ್ಯವೂ ಇಲ್ಲದ ಶಾಸಕರು ಹತ್ತು ತಲೆಯ ಮುಖವಾಡಧಾರಿ ಎನ್ನುವುದಕ್ಕೆ ಕುಕ್ಕರ್ ಹಂಚಿಕೆಯೇ ಸಾಕ್ಷಿಯಾಗಿದೆ. ಜೆಡಿಎಸ್ ಪಕ್ಷದಿಂದ ಉಚ್ಛಾಟಿತರಾದರೂ ಇನ್ನೂ ಶಾಸಕ ಸ್ಥಾನದಲ್ಲಿ ಮುಂದುವರೆದಿರುವುದು ಮತ್ತೊಂದು ಮುಖವಾಡದ ಅನಾವರಣ ಆಗುತ್ತಿದೆ. ಉಳಿದ ತಿಂಗಳಲ್ಲಿ ನಡೆಯುವ ಕೆಲಸಗಳ ಬಗ್ಗೆ ಹೇಳುವಂತಿಲ್ಲ. ಹಣ ಮಾಡುವ ಈ ತಂತ್ರಗಾರಿಕೆ ಜನರಿಗೆ ತಿಳಿದಿದೆ ಎಂದ ಅವರುv ನನ್ನ ಬಗ್ಗೆ ಹೇಳಿಕೆ ನೀಡಿದ ಶಾಸಕರ ಬೆಂಬಲಿಗರಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಾನು ನೇರ ಶಾಸಕರಿಗೆ ಪ್ರಶ್ನೆ ಕೇಳಿದ್ದೇನೆ ಅವರೇ ಉತ್ತರ ನೀಡಲಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಬೆಟ್ಟದಹಳ್ಳಿ ಶಶಿಕಿರಣ್ ಮಾತನಾಡಿ ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 48 ಸಾವಿರ ಮತಗಳನ್ನು ಪಡೆದಿತ್ತು ಇದನ್ನು ಅರಿತ ನೀವು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬಗ್ಗೆ ಮಾತನಾಡುವ ಭರದಲ್ಲಿ 12 ಸಾವಿರದ ಗೂಡು ಎಂದು ಹೇಳಿರುವ ನೀವು ಇದೇ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎ.ಕೃಷ್ಣಪ್ಪ ಅವರಿಗೆ ಕೇವಲ 32 ಸಾವಿರ ಮತಗಳನ್ನು ಕೊಡಿಸಿದ್ದೀರಿ. ಒಬ್ಬ ಶಾಸಕರಾಗಿ ನಿಮ್ಮ ಕೊಡುಗೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಾಂಗ್ರೆಸ್ ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಎಸ್.ಸಿ.ಘಟಕದ ಗುಬ್ಬಿ ಬ್ಲಾಕ್ ಅಧ್ಯಕ್ಷ ಶಿವಣ್ಣ,m ನಿಟ್ಟೂರು ಅಧ್ಯಕ್ಷ ಫಣೀಂದ್ರ, ಎಸ್.ಸಿ ಘಟಕದ ಉಪಾಧ್ಯಕ್ಷರಾದ ಯೋಗೀಶ್, ದೀಪಕ್ ಮುಖಂಡರಾದ ಎಂ.ವಿ.ಶ್ರೀನಿವಾಸ್, ಸಲೀಂಪಾಷ, ಸೌಭಾಗ್ಯಮ್ಮ, ಜಿ.ಎಲ್.ರಂಗನಾಥ್, ರಾಜಣ್ಣ ಇತರರು ಇದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!