ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಕಾಲ್ನಡಿಗೆ ಜಾಥಾ

ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಕಾಲ್ನಡಿಗೆ ಜಾಥಾ ತುಮಕೂರು: ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ನಾಗರಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಈಗಾಗಲೇ ನಮ್ಮ ದೇಶದಲ್ಲಿ ಸಿರಿಧಾನ್ಯಗಳ ಮಹತ್ವನ್ನು ಜನರು ಬಹಳಷ್ಟು ಅರಿತುಕೊಂಡಿದ್ದಾರೆ. ಅದರಲ್ಲೂ ಕರ್ನಾಟಕ ಮುಂಚೂಣಿಯಲ್ಲಿದ್ದು, ಕಳೆದ 15 ವರ್ಷಗಳಿಂದ ರೈತರು, ಸರ್ಕಾರ ಮತ್ತು ಅಧಿಕಾರಿಗಳು ಸಿರಿಧಾನ್ಯಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸಿರಿಧಾನ್ಯಗಳ ಮಹತ್ವ ತಿಳಿಸುವ ಸಲುವಾಗಿ ಈ ಜಾಥಾ ಮಾಡಲಾಗುತ್ತಿದೆ ಎಂದ ಅವರು, ಸಿರಿಧಾನ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರವಾಗಿದೆ. ಜತೆಗೆ ಈ ಸಿರಿಧಾನ್ಯಗಳು ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಯಾಗಿವೆ ಎಂದು ಅವರು ಹೇಳಿದರು.

ತುಮಕೂರು ಕಡಿಮೆ ಮಳೆಯಾಗುವ ಜಿಲ್ಲೆ. ಹಾಗಾಗಿ ಈ ಪ್ರದೇಶದ ಮಣ್ಣಿನಲ್ಲಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳನ್ನು ಬೆಳೆಯಬಹುದು ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ ಎಂದರು.

ಯಾವುದು ನಮ್ಮ ನೆಲಕ್ಕೆ ಒಗ್ಗುತ್ತದೋ ಅಂತಹ ಆಹಾರದ ಬೆಳೆಯನ್ನು ಬೆಳೆಯಲು ಮುಂದಾಗುವುದು ಒಳಿತು ಎಂದು ಅವರು ತಿಳಿಸಿದರು.

ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾಲ್ನಡಿಗೆ ಜಾಥಾ ನಡೆಸಿದ್ದೇವೆ. ಹಾಗೆಯೇ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸುಮಾರು 9 ಬಗೆಯ ಸಿರಿಧಾನ್ಯಗಳು ಇವೆ. ಈ 9 ಬಗೆಯ ಸಿರಿಧಾನ್ಯಗಳನ್ನು ಉತ್ತಮ ಆರೋಗ್ಯ ದೃಷ್ಠಿಯಿಂದ ಬಳಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ರೈತರಿಗೆ ಈ ಸಿರಿಧಾನ್ಯ ಬೆಳೆ ಬೆಳೆಯಲು ಅಗತ್ಯ ಪ್ರೋತ್ಸಾಹವನ್ನು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್. ರವಿ ಮಾತನಾಡಿ 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲು ಹಾಗೂ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಜನರಲ್ಲಿ ಅರಿವು ಮೂಡಿಸಲು ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದೆ ಎಂದರು.

ಸಿರಿಧಾನ್ಯ ಅತಿ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆ. ಜತೆಗೆ ಅತಿ ಹೆಚ್ಚು ಪೌಷ್ಠಿಕಾಂಶ, ಫೈಬರ್ ಹೊಂದಿರುವ ಆಹಾರ ಪದಾರ್ಥ ಎಂದ ಅವರು, ರಾಗಿ, ನವಣೆ, ಆರ್ಕ ಸೇರಿದಂತೆ ಇತರೆ ಸಿರಿಧಾನ್ಯಗಳನ್ನು ಉತ್ತಮ ಆರೋಗ್ಯಕ್ಕಾಗಿ ಬಳಸಬಹುದಾಗಿದೆ. ಅಲ್ಲದೆ ಮಧುಮೇಹಿಗಳಿಗೆ ಸಿರಿಧಾನ್ಯಗಳು ಉತ್ತಮ ಆಹಾರವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳಕಚೇರಿಯಿಂದ ಪ್ರಾರಂಭವಾದ ಈ ಕಾಲ್ನಡಿಗೆ ಜಾಥಾ ನಗರದ ಪ್ರಮುಖ ರಸ್ತೆಗಳ ಮುಖೇನ ಸರ್ಕಾರಿ ಜೂನಿಯರ್ ಕಾಲೇಜುವರೆಗೆ ಸಾಗಿ ಸಿರಿಧಾನ್ಯ ಮತ್ತು ಸಾಯವಯ ಮೇಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಕಾಲ್ನಡಿಗೆ ಜಾಥಾದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಅಶೋಕ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣಪ್ಪ, ತೋಟಗಾರಿಕೆ ಉಪನಿರ್ದೇಶಕ ರಘು, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಾಗೂ ಮತ್ತಿತರ ಅಧಿಕಾರಿಗಳು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸಾರ್ವಜನಿಕರಿಗೆ ಉಣಬಡಿಸಿ ನಂತರ ತಾವೂ ಸವಿದರು.

You May Also Like

error: Content is protected !!