ಗುಬ್ಬಿ: ರಾಷ್ಟ್ರೀಯ ಮಹತ್ವವಾದ ಬೃಹತ್ ರೈತರ ಕೃಷಿ ಭೂಮಿ ಅಭಿವೃದ್ದಿಗೆ ಹಾಗೂ ಸಾರ್ವಜನಿಕರ ಅಭಿವೃದ್ದಿಗೆ ಒತ್ತಾಯಿಸಿ ಎರಡನೇ ಬಾರಿ ಪಾದಯಾತ್ರೆಯನ್ನು ಹಾಸನ ಜಿಲ್ಲೆ ಕನಕಚೇನಹಳ್ಳಿ ಗ್ರಾಮದಿಂದ ಇದೇ ತಿಂಗಳ 3 ರಿಂದ ಹೊರಟ ಪಾದಯಾತ್ರೆ ಶುಕ್ರವಾರ ಗುಬ್ಬಿಗೆ ಆಗಮಿಸಿ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.
ಕೆ.ಬಿ.ಕ್ರಾಸ್ ಮೂಲಕ ಬೆಳಿಗ್ಗೆ ಹೊರಟ ಯಾತ್ರೆ ಸಂಜೆ ವೇಳೆಗೆ ಗುಬ್ಬಿಗೆ ತಲುಪಿದೆ. ಇದೇ ತಿಂಗಳ 9 ರಂದು ಬೆಂಗಳೂರು ತಲುಪಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಂಘದ 33 ಬೇಡಿಕೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ. ಕೂಡಲೇ ಬೇಡಿಕೆ ಈಡೇರಿಕೆ ಆಗದಿದ್ದಲ್ಲಿ ಯಶವಂತಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಪಟೇಲ್ ಕೆ.ಎಚ್.ಎಸ್ ಪ್ರಸನ್ನಕುಮಾರ್ ಎಚ್ಚರಿಕೆ ನೀಡಿದರು.

ಮೊದಲ ಬಾರಿ ಪಾದಯಾತ್ರೆ ಮೂಲಕ ಸಲ್ಲಿಸಿದ ಬೇಡಿಕೆಗೆ ಸಿಎಂ ಬೊಮ್ಮಾಯಿ ಅವರು ಸ್ಪಂದಿಸಿಲ್ಲ. ನಮ್ಮನ್ನು ಭೇಟಿ ಮಾಡಲಿಲ್ಲ. ಈ ಬಾರಿ ನಮ್ಮನ್ನು ಭೇಟಿ ಮಾಡದಿದ್ದಲ್ಲಿ ಸಿಎಂ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಹುಡುಕಿದವರಿಗೆ ಸೂಕ್ತ ಬಹುಮಾನ ಕೊಡುವ ಘೋಷಣೆ ಹಾಕುತ್ತೇವೆ ಎಂದು ಎಚ್ಚರಿಸಿದ ಅವರು ರೈತ ಪರ 33 ಬೇಡಿಕೆ ಈಡೇರಿಕೆ ಮಾಡಲೇಬೇಕು ಎಂದು ಒತ್ತಾಯಿಸಿದ ಅವರು ಗುಬ್ಬಿ ತಾಲ್ಲೂಕು ಗಡಿ ಭಾಗದಲ್ಲಿ ರೈತರ ಯಾತ್ರೆಗೆ ಸೂಕ್ತ ರಕ್ಷಣೆ ನೀಡಲಿಲ್ಲ. ಸಚಿವರು, ಉನ್ನತ ಅಧಿಕಾರಿಗಳಿಗೆ ನೀಡುವ ರಕ್ಷಣೆ ಮೊದಲು ರೈತರಿಗೆ ನೀಡಬೇಕು. ಕೆ.ಬಿ.ಕ್ರಾಸ್ ಬಳಿಯಿಂದ ಬರುವ ವೇಳೆ ಇಬ್ಬರು ರೈತರಿಗೆ ಅಪಘಾತ ಆಗುವ ಸಂಭವವಿತ್ತು. ಈ ಬಗ್ಗೆ ತಾಲ್ಲೂಕು ಆಡಳಿತ ಸೂಕ್ತ ಕ್ರಮ ವಹಿಸಿ ನಾಳೆ ಬೆಳಿಗ್ಗೆ ಗುಬ್ಬಿ ಗಡಿ ದಾಟಿಸುವ ಕೆಲಸ ಪೊಲೀಸರು ಮಾಡುವಂತೆ ತಾಲ್ಲೂಕು ಆಡಳಿತ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ತಿಪಟೂರು ವೆಂಕಟೇಶ್, ಅಯೂಬ್ ಪಾಷ, ಕೋಟೆ ಬೀರಪ್ಪ, ಶಾಂತಮ್ಮ, ರಂಗಸ್ವಾಮಿ, ನೂರ್ ಆಲಂ, ಬಸವರಾಜ್, ಸೋಮಶೇಖರ್ ಇತರರು ಇದ್ದರು.