ಗುಬ್ಬಿ: ಗುಬ್ಬಿಯ ಪ್ರಸಿದ್ದ ಶ್ರೀ ಚಿದಂಬರಾಶ್ರಮ ಗೌರವಾಧ್ಯಕ್ಷರಾದ ಅವಧೂತ ಶ್ರೀ ಶಿವ ಚಿದಂಬರ ಶರ್ಮಾ (94) ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಚಿದಂಬರ ಸ್ವಾಮೀಜಿಗಳ ನಂತರ 1966 ರಲ್ಲಿ ಇಡೀ ಚಿದಂಬರಾಶ್ರಮ ಜವಾಬ್ದಾರಿ ವಹಿಸಿ ಸುದೀರ್ಘ 59 ವರ್ಷ ಅಭಿವೃದ್ದಿ ಪಡಿಸಿ ಶನಿವಾರ ದತ್ತಾಂಜನೇಯ ಸನ್ನಿಧಿಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ.ಚಿದಂಬರ ರೀಸರ್ಚ್ ಸೆಂಟರ್ ಸ್ಥಾಪನೆ ಮೂಲಕ ಸಂಸ್ಕೃತ ಮತ್ತು ವೇದಾಧ್ಯಯನಕ್ಕೆ ಹೊಸ ಆಯಾಮ ನೀಡಿದರು. ಗುರು ಕುಲ ಪದ್ಧತಿ ಜೊತೆಗೆ ಬಡ ಮಕ್ಕಳಿಗೆ ಅಕ್ಷರ ಮತ್ತು ಅನ್ನ ಪ್ರಸಾದ ನೀಡುತ್ತಾ ಪಬ್ಲಿಕ್ ಸ್ಕೂಲ್ ನಿರ್ಮಿಸಿ ಆಂಗ್ಲ ಮಾಧ್ಯಮಕ್ಕೂ ನಾಂದಿ ಹಾಡಿ ಆಧುನಿಕ ಸ್ಪರ್ಶ ನೀಡಿದರು. ಆಶ್ರಮದ ಸುತ್ತಲಿನ ಗ್ರಾಮದ ಬಡ ಮಕ್ಕಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಸಹಿಷ್ಣುತೆಗೆ ಇಲ್ಲಿ ಎಲ್ಲಾ ಧರ್ಮದ ಮಕ್ಕಳು ಇರುವಿಕೆ ಸಾಕ್ಷಿಯಾಗಿದೆ. ಸಂಸ್ಕೃತ ಉನ್ನತ ವ್ಯಾಸಂಗಕ್ಕೆ ಅನುವು ಮಾಡಿದರು. ಅವಧೂತರಾಗಿ ಅವರಿಂದ ಕಲಿತ ಸಾವಿರಾರು ಶಿಷ್ಯರು ದೇಶ ವಿದೇಶದಲ್ಲೂ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಸಾವಿರಾರು ಭಕ್ತ ವೃಂದ ಅಗಲಿದ ಅವಧೂತರು ಓರ್ವ ಪುತ್ರ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಸಚ್ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ಸಂಜೆ 5.30 ಕ್ಕೆ ಸಕಲ ಬ್ರಾಹ್ಮಣ ವಿಧಿವಿಧಾನ ಪ್ರಕ್ರಿಯೆಯಲ್ಲಿ ಆಶ್ರಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಆಶ್ರಮದ ಟ್ರಸ್ಟ್ ತಿಳಿಸಿದೆ.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.