ಗುಬ್ಬಿ: ಕಳೆದ ಇಪ್ಪತ್ತು ವರ್ಷಗಳಿಂದ ಶಾಸಕರಾದವರು ಅಭಿವೃದ್ದಿ ಮೂಲಕವೇ ಜನರ ಬಳಿ ತೆರಳದೆ ಕುಕ್ಕರ್ ಹಂಚಿಕೆ, ಅಕ್ಕಿಕಾಳು ಆಣೆ ಪ್ರಮಾಣ, ಆಧಾರ್ ಕಾರ್ಡ ಪ್ರತಿ ಹೀಗೆ ನಾನಾ ತರ ಪ್ರಯತ್ನ ಗುಬ್ಬಿ ಜನತೆ ಸೂಕ್ಷ್ಮವಾಗಿ ಆಲಿಸುತ್ತಿದೆ. ಕೆಲಸ ಮಾಡಿದ್ದರೆ ಈ ಪ್ರಯತ್ನ ಅವಶ್ಯವಿತ್ತೇ ಅಥವಾ ಅನಿವಾರ್ಯವೇ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಪ್ರಶ್ನಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಪ್ರತಿಯೊಂದು ಮನೆಯಲ್ಲೂ ಮೂರ್ನಾಲ್ಕು ಕುಕ್ಕರ್ ಇರುವಾಗ ಈ ಆಮಿಷ ತೋರುತ್ತಿದ್ದಾರೆ. ಈ ಸಂಬಂಧ ಕೂಲಿ ಕಾರ್ಮಿಕನೊಬ್ಬ ಪ್ರತಿಕ್ರಿಯಿಸಿ ಕುಕ್ಕರ್ ಬೆಲೆಯನ್ನು ನಾನು ಎರಡು ಗಂಟೆಯಲ್ಲಿ ದುಡಿಯುತ್ತೇನೆ ಎಂದಿದ್ದಾನೆ. ಇಂತಹ ಆಸೆ ಆಮಿಷಗಳಿಗೆ ಮತದಾರ ಬಲಿಯಾಗುವುದಿಲ್ಲ ಎಂಬುದು ತಿಳಿಯಬೇಕು ಎಂದರು.
ಜನರು ಮೂಲಭೂತ ಸೌಕರ್ಯಗಳನ್ನು ಮೊದಲು ಕೇಳಿ ಪಡೆಯಿರಿ. ನಾಲ್ಕು ಬಾರಿ ಗೆಲ್ಲಿಸಿದ ನಿಮಗೆ ಕೇಳುವ ಹಕ್ಕಿದೆ. ಈಗಾಗಲೇ ರಸ್ತೆ ಸರಿ ಇಲ್ಲದೆ ಬಸ್ಸುಗಳು ಗ್ರಾಮಕ್ಕೆ ತೆರಳಿಲ್ಲ. ಈ ಬಗ್ಗೆ ಕಡಬ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ತಾಲ್ಲೂಕಿನ ಜನರಿಗೆ ತಿಳಿದಿದೆ. ಈ ಮೂಲ ಸೌಲಭ್ಯ ರಸ್ತೆ ನೀರು ಕರೆಂಟ್ ಈ ಕೆಲಸ ಮಾಡದೇ ಇಪ್ಪತ್ತು ವರ್ಷದ ತಪ್ಪನ್ನು ಒಂದು ಕುಕ್ಕರ್ ಮೂಲಕ ಮುಚ್ಚುವ ಪ್ರಯತ್ನ ನಡೆದಿದೆ ಎಂದು ವ್ಯಂಗ್ಯವಾಡಿದ ಅವರು ಇದು ಪ್ರಜಾಪ್ರಭುತ್ವ. ಯುವಕರು ಭಯ ಪಡುವ ಅವಶ್ಯವಿಲ್ಲ. ಜೆಡಿಎಸ್ ಪಂಚರತ್ನ ಯೋಜನೆ ಬಗ್ಗೆ ಮಾಹಿತಿ ಪ್ರಚಾರ ಪಡಿಸಿ. ಈ ಹಿಂದೆ ಸಾಲಮನ್ನಾ ಯೋಜನೆಯಡಿ ಪ್ರಯೋಜನ ಪಡೆದ ಗುಬ್ಬಿ ಕ್ಷೇತ್ರದ 16 ಸಾವಿರ ಮಂದಿ ರೈತರ ಮನೆ ಬಾಗಿಲಿಗೆ ಪಂಚರತ್ನ ಬಗ್ಗೆ ವಿವರಿಸಿ ಎಂದು ತಿಳಿಸಿದರು.
ರೈತರ ಪರ ಚಿಂತನೆ ಮಾಡುವ ಕುಮಾರಣ್ಣ ಅವರ ಬಗ್ಗೆ ರಾಜ್ಯದ ಜನರ ಒಲವಿದೆ. ಅವರ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆ ಸಾಕಷ್ಟು ಪರಿಣಾಮ ಬೀರಿದೆ. ಈ ಜೊತೆಗೆ ಮಹಿಳೆಯರ ಸಂಘದ ಸಾಲ ಮನ್ನಾ ಘೋಷಣೆ ಮಹಿಳಾ ವರ್ಗ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಈ ಕುಕ್ಕರ್ ಆಸೆ ಆಮಿಷ ಮಹಿಳೆಯರಿಗೆ ಗುರಿಯಾಗಿಸಿಕೊಂಡು ನೀಡಲಾಗಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಎಚ್ಚರವಹಿಸಿ ಸ್ವಾಭಿಮಾನ ಮಾರಿಕೊಳ್ಳದಂತೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.

ಸ್ಥಳೀಯ ಮುಖಂಡ ಸುರೇಶ್ ಮಾತನಾಡಿ ರಾಜೀನಾಮೆ ಪರ್ವ ಎನ್ನುವ ಕಾರ್ಯಕ್ರಮ ಹಾಸ್ಯಾಸ್ಪದ ಎನಿಸಿದೆ. ಯಾರು ಯಾರಿಗೆ ರಾಜೀನಾಮೆ ನೀಡುತ್ತಾರೆ ಅನ್ನೋದೇ ತಿಳಿಯದು. ಕೆಲ ಬೆಂಬಲಿಗರ ಈ ಕಾರ್ಯಕ್ರಮ ಪಕ್ಷಕ್ಕೆ ಯಾವುದೇ ತೊಂದರೆ ನೀಡದು. ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ದಿ ಪ್ರಶ್ನಿಸುವ ಮತದಾರರಿಗೆ ಧಮ್ಕಿ ಹಾಕುವ ಪ್ರವೃತ್ತಿ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಎಷ್ಟು ಸರಿ. ಬೆಂಬಲಿಗರನ್ನು ಮತ್ತು ಭಾಷೆ ಮೇಲೆ ಹಿಡಿತ ಇಟ್ಟುಕೊಳ್ಳಿ. ಹಿಟ್ಲರ್ ಆಳ್ವಿಕೆ ಇಲ್ಲಿ ನಡೆಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾತೇನಹಳ್ಳಿ ಗ್ರಾಮದ ನೂರಾರು ಯುವ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಆದರು.
ಕಾರ್ಯಕ್ರಮದಲ್ಲಿ ಭೋಜಣ್ಣ, ಚೇತನ್, ಮಂಜುನಾಥ್, ರಾಕೇಶ್, ಶರತ್, ಬಸವರಾಜು, ಸಂಜಯ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.