.
ಗುಬ್ಬಿ : ತಾಲ್ಲೂಕಿನಲ್ಲಿ ತನ್ನದೇ ಭಕ್ತವೃಂದ ಹೊಂದಿದ್ದ ಲಿಂಗೈಕ್ಯ ಶ್ರೀ ಗೌರಿಶಂಕರ ಸ್ವಾಮೀಜಿಗಳ ಸ್ಮರಣಾರ್ಥ ಪ್ರತಿ ವರ್ಷ ದಾಸೋಹ ಕಾರ್ಯಕ್ರಮ ನಡೆಸಲಾಗಿತ್ತು. ಈ ಬಾರಿ ಜನರ ಅತ್ಯಗತ್ಯ ಆರೋಗ್ಯ ಸೇವೆ ಮಾಡಲು ನಿರ್ಧರಿಸಿ ಗುಬ್ಬಿ ತಾಲ್ಲೂಕಿನಲ್ಲಿ ವಿಶೇಷ ಹಾಗೂ ವಿಭಿನ್ನ ಶಿಬಿರ ಆಯೋಜಿಸಿ ಮಲ್ಟಿ ಸ್ಪೆಷಾಲಿಟಿ ಶಿಬಿರವನ್ನು ಇದೇ ತಿಂಗಳ 11 ರಂದು ಬೃಹತ್ ಮಟ್ಟದಲ್ಲಿ ಉಚಿತ ಆಯೋಜಿಸಿ ಶ್ರಿಗಳಲ್ಲಿ ಭಕ್ತಿ ಸಮರ್ಪಿಸಿಲಾಗುವುದು ಎಂದು ಆಯೋಜಕ ಆದರ್ಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶ್ರೀಗಳ 7 ನೇ ವರ್ಷದ ಸ್ಮರಣೆಗೆ ಭಕ್ತ ವೃಂದ ಆಯೋಜಿಸಿರುವ ಈ ಮಲ್ಟಿ ಸ್ಪೆಷಾಲಿಟಿ ಶಿಬಿರ ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 20 ನಿಮಿಷದಲ್ಲಿ ಫಲಿತಾಂಶ ನೀಡುವ ಕಾರ್ಯ ಮಾಡಲಾಗುವುದು. ಸುಮಾರು 20 ಸಾವಿರಕ್ಕೂ ಅಧಿಕ ಹಣ ವ್ಯಯವಾಗುವ ಈ ಪರೀಕ್ಷೆ ಉಚಿತವಾಗಿ ನಡೆಸುವ ಮೂಲಕ ಸ್ವಾಮೀಜಿಗಳ ಸಾಮಾಜಿಕ ಕಳಕಳಿ ಮುಂದುರೆಸುವ ಕಾಯಕ ಮಾಡುತ್ತೇವೆ ಎಂದರು.
ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ನಡೆಯುವ ಶಿಬಿರದಲ್ಲಿ ಮಾರಕ ರೋಗ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೋಗಗಳಿಗೂ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ನಡೆಸಲಾಗುವುದು. ಈ ಕಾರ್ಯಕ್ಕೆ ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ, ಚಾಲುಕ್ಯ ಆಸ್ಪತ್ರೆ, ಸಿದ್ದಾರ್ಥ ದಂತ ಮಹಾವಿದ್ಯಾಲಯ, ಸೋನಿಯಾ ಕಾಲೇಜ್ ಆಫ್ ಫಾರ್ಮಸಿ, ಕೇರಿನ್ ಲೈಫ್ ಸೈನ್ಸ್, ಅಪೋಲೋ ಆಸ್ಪತ್ರೆ, ರೆಡ್ ಸರ್ಕಲ್ ರಕ್ತ ನಿಧಿ, ತುಳಸಿ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಹಲವು ಸಂಸ್ಥೆಗಳ ಸಹಕಾರದಿಂದ ಈ ಶಿಬಿರ ಬೃಹತ್ ಮಟ್ಟದಲ್ಲಿ ನಡೆಸಲಾಗುವುದು ಎಂದ ಅವರು ಕರೋನಾ ನಂತರ ರೋಗ ರುಜಿನಗಳು ಹೆಚ್ಚಾಗಿವೆ. ಹೊಸ ವೈರಸ್ ಗಳ ಹಾವಳಿಗೆ ಜನರು ತತ್ತರಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಜನೋಪಯೋಗಿ ಎನಿಸಿ ಉಚಿತ ಸೇವೆ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ತಾಲ್ಲೂಕಿನ ಜನ ಬಳಸಿಕೊಳ್ಳಲು ಕರೆ ನೀಡಿದರು.

ಶ್ರೀ ಗೌರಿಶಂಕರ ಸ್ವಾಮೀಜಿಗಳ ಭಕ್ತಿ ವೃಂದದ ಮೆಳೆಕಲ್ಲಹಳ್ಳಿ ರಮೇಶ್ ಮಾತನಾಡಿ ಸ್ವಾಮೀಜಿಗಳ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಇಲ್ಲಿ ಪೂರ್ಣ ಪ್ರಮಾಣದ ತಪಾಸಣೆ ಜೊತೆಗೆ ಅಗತ್ಯ ಔಷಧಿ ವಿತರಣೆ ಮಾಡಲಾಗುತ್ತಿದೆ. ಶ್ರೀಗಳ ದಾಸೋಹ ಪದ್ಧತಿಯನ್ನು ನಿಲ್ಲಿಸದೆ ಭಕ್ತರ ಮೂಲಕ ಭಿಕ್ಷೆ ತಂದು ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ. ಎವಿಕೆ ಸಮುದಾಯ ಭವನದಲ್ಲಿ ಬೆಳಿಗ್ಗೆ 9 ರಿಂದ 5 ವರೆಗೆ ನಡೆಯುವ ಶಿಬಿರದಲ್ಲಿ ಶ್ರೀ ರಾಜಶೇಖರ ಸ್ವಾಮೀಜಿ, ಎವಿಕೆ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ರಾಮಯ್ಯ, ಜಿ.ಎಸ್.ಪ್ರಸನ್ನಕುಮಾರ್, ಜಿ.ಚಂದ್ರಶೇಖರ್, ಜಿ.ಎನ್. ಅಣ್ಣಪ್ಪಸ್ವಾಮಿ, ಡಿ ಎಚ್ ಒ ಡಾ.ಮಂಜುನಾಥ್, ಬಿಇಓ ಸೋಮಶೇಖರ್ ಇತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ವಿನಯ್ ತಿಪ್ಪೂರು, ಷಡಕ್ಷರಿ ಅಮ್ಮನಘಟ್ಟ, ವೈದ್ಯಕೀಯ ಸಿಬ್ಬಂದಿಗಳಾದ ಅಶ್ವಿನಿ ಅಂಗಡಿ, ರೂಪಶೆಟ್ಟಿ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.