ಕೊರಟಗೆರೆ ;- ಇತಿಹಾಸ ಪ್ರಸಿದ್ದ ದೊಡ್ಡಕಾಯಪ್ಪ ದೇವಸ್ಥಾನ ಹಾಗೂ ಶಾರದಾ ಪೀಠದ ನಿವೇದಿತ ಶಾಲೆಯ ಮಧ್ಯೆ ಅಬಕಾರಿ ಇಲಾಖೆಯವರು ಎಂ.ಎಸ್.ಐ.ಎಲ್ ಮಧ್ಯದಂಗಡಿ ತೆರೆಯಲು ಹೊರಟಿರುವುದು ಗ್ರಾಮಸ್ಥರ ಮತ್ತು ಮಹಿಳೆಯರ ಆಕ್ರೂಶಕ್ಕೆ ಕಾರಣವಾಗಿದೆ.
ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ಕುರಂಕೋಟೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ದೊಡ್ಡಕಾಯಪ್ಪ ಹಾಗೂ ಭೂತಪ್ಪನ ದೇವಸ್ಥಾನವಿದೆ. ಈ ದೇವಸ್ಥಾನದಿಂದ ರಸ್ತೆಯಲ್ಲಿ ಹೋದರೆ ಒಂದು ಕಿ.ಮೀಟರ್, ಹೊಲದ ಕಾಲು ದಾರಿಯಲ್ಲಿ ಹೋದರೆ ೫೦೦ ಮೀಟರ್ ದೂರದಲ್ಲಿ ಅಬಕಾರಿ ಇಲಾಖೆಯವರು ಎಂ.ಎಸ್.ಐ.ಎಲ್ ಮಧ್ಯ ದಂಗಡಿ ತೆರೆಯಲು ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ, ಇದು ಗ್ರಾಮಸ್ಥರ ಮತ್ತು ಮಹಿಳೆಯರ ಆಕ್ರೂಶಕ್ಕೆ ಕಾರಣವಾಗಿದೆ. ಗ್ರಾಮಸ್ಥರ ಹೇಳಿಕೆ ಪ್ರಕಾರ ದೊಡ್ಡಕಾಯಪ್ಪ ದೇವಸ್ಥಾನದ ಹೊರ ಆವರಣದಲ್ಲಿ ಹರಕೆ ತೀರಿಸಲು ಹೊರಗಡೆಯಿಂದ ಮಹಿಳೆಯರು ಸೇರಿದಂತೆ ಹಲವು ಭಕ್ತಾದಿಗಳು ರಾತ್ರಿ ವೇಳೆ ಮಲಗುತ್ತಾರೆ, ಎಂ.ಎಸ್.ಐ.ಎಲ್ ಮಧ್ಯದಂಗಡಿ ಪಕ್ಕದಲ್ಲೇ ಇರುವುದರಿಂದ ಪಾನಮತ್ತರಾದ ಕೆಲವು ಇಲ್ಲಿ ಕಳ್ಳತನ ಮಾಡುವ ಮತ್ತು ಗಲಬೆ ಮಾಡುವ ಸಂಭವ ಹೆಚ್ಚಾಗಿದೆ ಎಂದು ಭಕ್ತಾದಿಗಳ ಆರೋಪ ಹಾಗೂ ತುಮಕೂರಿ ನಿಂದ ತೋವಿನಕೆರೆ ಮಾರ್ಗವಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಮಧ್ಯದಂಗಡಿ ಇರುವ ಮಾರ್ಗದಲ್ಲಿ ಬರಬೇಕಿದೆ. ಆದರೆ ಈ ರಸ್ತೆಯು ೧೦ ಅಡಿ ಕಿರಿದಾಗಿದ್ದು ಮಧ್ಯದಂಗಡಿಗೆ ಬರುವರರು ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ತೋಂದರೆಯಾಗುತ್ತದೆ.

ವಿಷಾದಕರ ಸುದ್ದಿ ಏನೆಂದರೆ ಮಧ್ಯದಂಗಡಿಯ ಕಟ್ಟಡದ ಮಾಲಿಕ, ದೊಡ್ಡಕಾಯಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಒಬ್ಬರೇ ಆಗಿದ್ದು ಈ ಕಾನೂನು ಬಾಹಿರ ಮಧ್ಯದಂಗಡಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಎಂ.ಎಸ್.ಐ.ಎಲ್ ಮಧ್ಯದಂಗಡಿ ಕಟ್ಟಡಕ್ಕೆ ೪೦೦ ಮೀಟರ್ ದೂರದಲ್ಲಿ ಶಾರದ ಪೀಠದ ನಿವೇದಿತ ಶಾಲೆ ಇದ್ದು, ಈ ಶಾಲೆಯವರು ಮಧ್ಯದಂಗಡಿ ಬೇಡ ಎಂದು ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕುರಂಕೋಟೆ ಗ್ರಾಮದಿಂದ ನಿವೇದಿತ ಶಾಲೆಗೆ ಬರುವ ಮಕ್ಕಳು ಹಾಗೂ ಕೆಲ ಶಿಕ್ಷಕಿಯರು ಈ ಮಧ್ಯದಂಗಡಿ ಮುಂದೆಯೇ ನಡೆದುಕೊಂಡು ಬರಬೇಕಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬಿರುತ್ತದೆ ಹಾಗೂ ಮಧ್ಯದಂಗಡಿ ಯಿಂದ ೯೦೦ ಮೀಟರ್ ದೂರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ, ಆದರೂ ಮಧ್ಯದಂಗಡಿ ತೆರೆಯಲು ಪ್ರಭಾವ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆಂದು ಗ್ರಾಮದ ಹಲವು ಮಹಿಳೆಯರು ಆರೋಪಿಸಿ ಮಧ್ಯದಂಗಡಿ ತೆರೆಯದಂತೆ ಒತ್ತಾಯಿಸಿದ್ದಾರೆ.
ನಿಯಮ ಗಾಳಿಗೆ ತೂರುತ್ತಿರುವ ಅಬಕಾರಿ ಇಲಾಖೆ;-
ಕೊರಟಗೆರೆ ತಾಲೂಕಿನ ಅಬಕಾರಿ ಇಲಾಖೆ ಆಧಿಕಾರಿಗಳು ಇಲಾಖಾ ನಿಯಮಗಳನ್ನು ಮಾಮೂಲಿಗಾಗಿ ಕಾನೂನು ನಿಯಮ ಪಾಲಿಸದೇ ಇರುವಷ್ಟು ಇಡೀ ರಾಜ್ಯದಲ್ಲಿ ಯಾವ ಅಬಕಾರಿ ಇಲಾಖೆಯೂ ಈ ರೀತಿ ಇಲ್ಲ, ಕುರಂಕೋಟೆ ಗ್ರಾಮದಲ್ಲಿ ಇಷ್ಠೇಲ್ಲಾ ಮಧ್ಯದಂಗಡಿ ತೆರೆಯಲು ಕಾನೂನು ಉಲ್ಲಂಘನೆ ಸಾಕಷ್ಟು ಇದ್ದರೂ ಮಾಮೂಲಿಯಲ್ಲೇ ಅಬಕಾರಿ ಇಲಾಖೆ ಒಳ ಸಹಕಾರ ನೀಡುತ್ತಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ತಾಲೂಕಿನಲ್ಲಿ ಶ್ರೀಮಂತರ ಮಧ್ಯದಂಗಡಿಗಳು ವೇಳಾ ಪಟ್ಟಿ ಮತ್ತು ದರ ಪಟ್ಟಿ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಇದನ್ನು ಸರಿಯಾಗಿ ನಿಬಾಯಿಸದ ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೋ ಪೆಟ್ಟಿಗೆ ಅಂಗಡಿ, ಮನೆಯಲ್ಲಿ ಮಾರುವ ೫-೬ ಬಾಟಲ್ ಮಧ್ಯವನ್ನು ಹಿಡಿದು ಪತ್ರಿಕೆ ಮುಂದೆ ಪೋಸ್ ನೀಡುತ್ತಾರೆ. ಆದರೆ ಇವರುಗಳಿಗೆ ಮಧ್ಯವನ್ನು ಸರಬರಾಜು ಮಾಡಿದ ಬಾರ್ಗಳ ತಂಟೆಗೆ ಅಧಿಕಾರಿಗಳು ಹೋಗುವುದಿಲ್ಲ, ಕಾರಣ ಎಲ್ಲವೂ ನಿಗದಿತ ತಿಂಗಳ ಮಾಮೂಲಿಯಲ್ಲಿ ನಡೆದುಕೊಂಡು ಹೋಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನಾದರೂ ಜಿಲ್ಲೆಯ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಕೊರಟಗೆರೆ ಅಬಕಾರಿ ಆದಿಕಾರಿಗಳಿಗೆ ಕಾನೂನು ಪಾಲನೆ ಬಿಸಿ ಮುಟ್ಟಿಸ ಬೇಕಿದೆ.