ಗುಬ್ಬಿ: ಅಂಗಡಿ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ದಿನಸಿ ಅಂಗಡಿಗೆ ತಗುಲಿ ಸಂಪೂರ್ಣ ಅಂಗಡಿ ಭಸ್ಮವಾಗಿ 45 ಸಾವಿರ ನಗದು ಸೇರಿದಂತೆ ಸುಮಾರು ಮೂರು ಲಕ್ಷ ರೂಗಳ ದಿನಸಿ ಇತರೆ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಕಡಬ ಹೋಬಳಿ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ರಾತ್ರಿ ನಡೆದಿದೆ.ಗ್ರಾಮದ ಕೃಷಿಕ ಶಂಕರಯ್ಯ ಅವರಿಗೆ ಸಂಬಂದಿಸಿದ ದಿನಸಿ ಅಂಗಡಿ ಹಲವು ವರ್ಷಗಳಿಂದ ನಡೆಸಿದ್ದು ಜೀವನಕ್ಕೆ ಆಧಾರವಾಗಿತ್ತು. ಗ್ರಾಮಸ್ಥರಿಗೂ ಅವಶ್ಯ ಅಂಗಡಿ ಎನ್ನಿಸಿದ್ದ ಶಂಕರಯ್ಯ ಅವರ ದಿನಸಿ ಅಂಗಡಿ ಮೇಲೆ ಈಚೆಗೆ ಎಳೆದ ವಿದ್ಯುತ್ ತಂತಿ ಮರಗಳ ಮಧ್ಯೆ ಹಾದು ಹೋಗಿ ಹಾಗಾಗೇ ಶಾರ್ಟ್ ಸರ್ಕ್ಯೂಟ್ ಆಗುತ್ತಿತ್ತು. ಇದು ಅಂಗಡಿ ಇಟ್ಟು ಕೊಂಡು ಬದುಕು ನಡೆಸುವ ವ್ಯಾಪಾರಿಯ ಜೀವನ ಬೀದಿಗೆ ತಂದಿದೆ.ರಾತ್ರಿ ವೇಳೆ ನಡೆದ ಅಗ್ನಿ ದುರಂತ ಸ್ಥಳೀಯರ ಗಮನಕ್ಕೆ ಬರುವ ವೇಳೆ ಬೆಂಕಿಯ ಕೆನ್ನಾಲಿಗೆ ಅಂಗಡಿಯನ್ನು ಸಂಪೂರ್ಣ ಆವರಿಸಿತ್ತು. ಆಹಾರ ಪದಾರ್ಥ ಸೇರಿದಂತೆ ದಿನಸಿ ವಸ್ತುಗಳು ಸುಟ್ಟು ಬೂದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿತು.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದರು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ವರದಿ:
ಜಿ.ಆರ್.ರಮೇಶ ಗೌಡ, ಗುಬ್ಬಿ.