ಎಚ್ ಎಎಲ್ ಘಟಕದಲ್ಲಿ ಭೂ ಸಂತ್ರಸ್ತರಿಗೆ ಉದ್ಯೋಗ ನೀಡಿ : ಶಕ್ತಿಪೀಠ ಹಾಗೂ ಬಿಜೆಪಿ ಮುಖಂಡರ ಆಗ್ರಹ.

ಗುಬ್ಬಿ: ಸರ್ಕಾರ ಸ್ವಾಮ್ಯದ ದೊಡ್ಡ ಉದ್ದಿಮೆಯಲ್ಲಿ ಸಂತ್ರಸ್ತರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ಮೀಸಲಿಟ್ಟು ಅನುವು ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರಲ್ಲಿ ಶಕ್ತಿ ಪೀಠ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ತಹಶೀಲ್ದಾರ್ ಬಿ.ಆರತಿ ಅವರಲ್ಲಿ ಮನವಿ ಅರ್ಜಿ ಸಲ್ಲಿಸಿದರು.

ಸರೋಜಿನಿ ಮಹಿಷಿ ವರದಿ ಅನ್ವಯ ಅಥವಾ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಉದ್ಯೋಗ ಮೀಸಲಿಟ್ಟು ಸ್ಥಳೀಯರು ಹಾಗೂ ಭೂ ಸಂತ್ರಸ್ತರಿಗೆ ನೀಡುವಂತೆ ಆಗ್ರಹಿಸಬೇಕಿದೆ. ಮೋದಿ ಹೇಳಿದಂತೆ ಜನರು ಕೇಳಿದ್ದಾರೆ. ಹಾಗೆಯೇ ಈಗ ಜನರು ಹೇಳುವುದನ್ನು ಪ್ರಧಾನಿಗಳು ಕೇಳುತ್ತಾರೆ ಎಂಬ ನಂಬಿಕೆ ಮೇಲೆ ಅವರ ಗಮನಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಪಕ್ಷಾತೀತ ನಿಲುವು ತಾಳುವ ಅಗತ್ಯವಿದೆ. ಎಲ್ಲರನ್ನೂ ಒಗ್ಗೂಡಿಸಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಆಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಶಕ್ತಿ ಪೀಠ ಮ್ಯಾನೇಜಿಂಗ್ ಟ್ರಸ್ಟಿ ಕುಂದರನಹಳ್ಳಿ ರಮೇಶ್ ತಿಳಿಸಿದರು.

ಗುಬ್ಬಿಗೆ ಬಂದ ಈ ಬೃಹತ್ ಹೆಲಿಕಾಪ್ಟರ್ ಘಟಕ ಗೋವಾ ರಾಜ್ಯಕ್ಕೆ ವರ್ಗಾಯಿಸುವ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ಐದು ಲಕ್ಷ ಕೋಟಿಯ ಈ ಘಟಕ ಇಲ್ಲೇ ಉಳಿಸಿಕೊಳ್ಳಲು ರಾಜ್ಯದ 35 ಸಂಸದರನ್ನು ಒಗ್ಗೂಡಿಸಿ ಒತ್ತಾಯಿಸಲಾಗಿತ್ತು. ಅದೇ ಮಾದರಿಯಲ್ಲಿ ಉದ್ಯೋಗ ಮೀಸಲಿಗೆ ಕೂಡಾ ಆಗ್ರಹಿಸಲಾಗುವುದು. ಬಜೆಟ್ ಅಧಿವೇಶನದಲ್ಲಿ ಎಲ್ಲಾ ಸಂಸದರನ್ನು ಭೇಟಿ ಮಾಡುತ್ತೇವೆ. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡನ್ನೂ ಒತ್ತಾಯಿಸುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ ಎಂದರು.

ಮುಂದಿನ ತಿಂಗಳ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟಕಕ್ಕೆ ಆಗಮಿಸುವ ಕಾರಣ ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ತುರ್ತು ನಡೆಯಬೇಕಿದೆ. ಇಂತಹ ಘಟಕಕ್ಕೆ ಮತ್ತಷ್ಟು ಭೂಮಿ ಅಗತ್ಯವಿದೆ ಎನ್ನುವ ಮಾತು ಕೇಳಿ ಬಂದಿದೆ. ಜಾಗ ನೀಡುವ ಸಂತ್ರಸ್ತರಿಗೆ ಅಗತ್ಯ ಸವಲತ್ತು ಹಾಗೂ ಉದ್ಯೋಗ ಮತ್ತು ಬದಲಿ ಜಮೀನು ನೀಡುವುದು ಮಾಡಿದ್ದಲ್ಲಿ ಭೂಮಿ ರೈತರು ನೀಡುತ್ತಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಪಿ.ಬಿ.ಚಂದ್ರಶೇಖರಬಾಬು, ಎಸ್.ಡಿ ದಿಲೀಪ್ ಕುಮಾರ್, ಬಿ.ಎಸ್.ಪಂಚಾಕ್ಷರಿ, ಸಾಗರನಹಳ್ಳಿ ವಿಜಯ್ ಕುಮಾರ್, ಯತೀಶ್, ಸಿದ್ದರಾಮಯ್ಯ, ಲೋಕೇಶ್, ಪ್ರಮೋದ್, ಉಮೇಶ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!