ಬಿಜೆಪಿ ನಾಯಕರು ಸಾಗುವಳಿ ಚೀಟಿ ನಿರೀಕ್ಷೆಯಲ್ಲಿರುವ ಬಡ ಅನ್ನದಾತನಿಗೆ ಅನ್ಯಾಯ ಮಾಡುತ್ತಿದ್ದಾರೆ : ಶಾಸಕ ಶ್ರೀನಿವಾಸ್ ಆರೋಪ.

ಗುಬ್ಬಿ: ಬಗರ್ ಹುಕುಂ ಸಮಿತಿ ಸಭೆಗೆ ನಾಮಿನಿ ಸದಸ್ಯರು ಬಾರದಂತೆ ತಡೆಯೊಡ್ಡಿ ಅರ್ಹ ಫಲಾನುಭವಿ ರೈತರಿಗೆ ಬಿಜೆಪಿ ಸಂಸದರಾದಿ ಎಲ್ಲಾ ಮುಖಂಡರು ಸಲ್ಲದ ರಾಜಕೀಯ ಪಿತೂರಿ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ನೆಪದಲ್ಲಿ ರೈತರಿಗೆ ಅನ್ಯಾಯ ಮಾಡುವ ಬಿಜೆಪಿ ಮುಖಂಡರಿಗೆ ರೈತರು ಅವರವರ ಗ್ರಾಮದಲ್ಲಿ ಏನಾದರೂ ಬಿಚ್ಚುಕೊಂಡು ಹೊಡೆಯುತ್ತಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಖಾರವಾಗಿ ಪ್ರತಿಕ್ರಿಯಿಸಿದರು.

ತಾಲ್ಲೂಕು ಕಚೇರಿಯಲ್ಲಿ ಕರೆದಿದ್ದ ಬಗರ್ ಹುಕುಂ ಸಮಿತಿ ಸಭೆಯಿಂದ ಹೊರ ಬಂದ ಸಮಯದಲ್ಲಿ ಆಕ್ರೋಶದಲ್ಲಿ ಪ್ರತಿಭಟಿಸುತ್ತಿದ್ದ ಫಲಾನುಭವಿ ಅರ್ಜಿದಾರರನ್ನು ಕುರಿತು ಮಾತನಾಡಿ ನಂತರ ಸುದ್ದಿಗಾರರಿಗೆ ಹೇಳಿಕೆ ನೀಡಿ ಸಭೆಗೆ ಸರ್ಕಾರ ನೇಮಿಸಿರುವ ನಾಮ ನಿರ್ದೇಶನ ಸದಸ್ಯರು ಸಭೆಗೆ ಹಾಜರಾಗದೆ ಯಾವುದಕ್ಕೂ ಸಹಿ ಮಾಡುವುದಿಲ್ಲ ಎಂದು ಹೇಳಿರುವುದು ಅವರ ರೈತ ವಿರೋಧಿತನ ತೋರುತ್ತದೆ. ಬಡವರಿಗೆ ಕೆಲಸ ಮಾಡಲು ಬಿಜೆಪಿ ಸಿದ್ದವಿಲ್ಲ. ಇಲ್ಲೂ ಸಲ್ಲದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾಲ್ಕು ದಿನದ ಮುಂಚೆ ನೋಟಿಸ್ ನೀಡಿ ಒಂದು ಗಂಟೆ ಕಾದರೂ ಸಭೆಗೆ ಬಾರದ ಸದಸ್ಯರು ಪೋನ್ ಕಾಲ್ ಗೂ ಸಂಪರ್ಕಕ್ಕೆ ಬರಲಿಲ್ಲ. ನಂತರ ಯಾವುದಕ್ಕೂ ಸಹಿ ಮಾಡುವುದಿಲ್ಲ ಎಂಬ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ. ಸಿಓಡಿ ತನಿಖೆ ಬಗ್ಗೆ ತಿಳಿಯಬೇಕು. ಮೊದಲ ಹಂತದಲ್ಲಿ 400 ಕಡತ ಎರಡನೇ ಹಂತದಲ್ಲಿ 683 ಕಡತ ತನಿಖೆಗೆ ಒಳಪಟ್ಟಿದೆ. ಇವುಗಳು 1998 ರಿಂದ 2001 ರವರೆಗೆ ತಹಶೀಲ್ದಾರ್ ಮಂಜೂರು ಮಾಡುವ ಸಮಯದಲ್ಲಿ ನಡೆದ ಅವ್ಯವಹಾರವಾಗಿದೆ. ಈ ಕನಿಷ್ಠ ಜ್ಞಾನವಿಲ್ಲದ ಬಿಜೆಪಿ ಮುಖಂಡರು ನಾಮಿನಿ ಸದಸ್ಯರನ್ನು ಗೊಂಬೆಯಂತೆ ಆಡಿಸುತ್ತಿದ್ದಾರೆ. ಸಭೆಗೂ ಸಿಓಡಿ ತನಿಖೆಗೂ ಸಂಬಂಧವಿಲ್ಲ ಎಂಬ ಅಂಶ ಸಾಮಾನ್ಯರಿಗೂ ತಿಳಿದಿದೆ ಎಂದ ಅವರು ರೈತರಿಗೆ ಅನ್ಯಾಯ ಮಾಡಿ ಸಲ್ಲದ ರಾಜಕಾರಣ ಮಾಡಬೇಡಿ. ನನಗೆ ಇಲ್ಲಿ ಕ್ರೆಡಿಟ್ ಅನ್ನೋ ದುರಾಲೋಚನೆ ಮೊದಲು ಬಿಡಿ. ಈ ವಿಚಾರದಲ್ಲಿ ಮರಳಿ ಸಭೆ ನಡೆಸಲು ನಾನು ಸಿದ್ದ. ನಾಮಿನಿ ಸದಸ್ಯರು ಬರುವುದಾದರೆ ಯಾವುದೇ ಕ್ಷಣದಲ್ಲಾದರೂ ಬರುತ್ತೇನೆ ಎಂದು ವಾಗ್ದಾನ ಮಾಡಿದರು.

57 ನಮೂನೆಯಲ್ಲಿ 18 ಸಾವಿರ ಅರ್ಜಿಗಳು, 50-53 ನಮೂನೆಯಲ್ಲಿ 6 ಸಾವಿರ ಅರ್ಜಿ ಬಾಕಿ ಇವೆ. ಹೀಗೆ ಸಭೆಯನ್ನೇ ಬಹಿಷ್ಕರಿಸಿದ ಬಿಜೆಪಿ ನಾಮಿನಿ ಸದಸ್ಯರು ನೇಮಕ ಆಗಿರುವುದು ಏತಕ್ಕೆ ಎಂಬುದು ಜನ ಹಳ್ಳಿ ಕಡೆ ಹೋದಾಗ ತಿಳಿಸುತ್ತಾರೆ. ನಾನು ತೆರೆದ ಪುಸ್ತಕ. ನನ್ನ ಕುಟುಂಬ ಅಥವಾ ಸಂಬಂಧಿಕರ ಹೆಸರಿನಲ್ಲಿ ಮಂಜೂರು ಆಗಿದ್ದರೆ ತೋರಿಸಲಿ. ಸಿಓಡಿ ತನಿಖೆ ಆದರೆ ನನಗೆ ತೊಂದರೆ ಆಗುತ್ತೆ ಎಂದು ಕೆಲವರು ಭಾವಿಸಿದ್ದರು. ಆದರೆ ನಾನೇ ಸಿಓಡಿ ತನಿಖೆಗೆ ಆಗ್ರಹಿಸಿದೆ ಎಂಬುದು ತಿಳಿದಿಲ್ಲ ಎಂದು ವ್ಯಂಗ್ಯವಾಡಿದ ಅವರು ಜ್ಞಾನ ಮಾನ ಇದ್ದರೆ ಈ ಕೆಲಸ ಮಾಡುತ್ತಿರಲಿಲ್ಲ. ಮುಗ್ದ ರೈತರ ಬಾಳಲ್ಲಿ ಆಟವಾಡುತ್ತಿರುವ ಬಿಜೆಪಿ ಮುಖಂಡರು ನಾಲ್ಕು ತಿಂಗಳಲ್ಲಿ ಚುನಾವಣೆ ಬರುತ್ತೆ. ಅದರಲ್ಲಿ ವಾಸಣ್ಣನಿಗೆ ಮತ ಹಾಕಿ ಬಿಡುತ್ತಾರೆ ಎಂಬ ಕೀಳು ಆಲೋಚನೆ ಪ್ರದರ್ಶಿಸಿದ್ದಾರೆ. ರೈತರ ಬವಣೆ ಆಲಿಸದೆ ಕೇವಲ ಪಿತೂರಿ ಮಾಡುತ್ತಾ ಕಾಲ ಕಳೆಯುವ ಬದಲು ಈ ಬಗ್ಗೆ ಜ್ಞಾನ ಬೆಳೆಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಿ. ಗೊಂದಲ ಸೃಷ್ಠಿಸಬೇಡಿ ಎಂದು ತಿಳಿಸಿದರು.
ವರದಿ: ಹರಿಪ್ರಿಯ ರಮೇಶ ಗೌಡ, ಗುಬ್ಬಿ.

You May Also Like

error: Content is protected !!