:
ಗುಬ್ಬಿ: ಚುನಾವಣೆ ಸಮೀಪಿಸಿದಾಗ ಬಗರ್ ಹುಕುಂ ಸಮಿತಿ ಸಭೆ ನಡೆಸುವುದು ಜೊತೆಗೆ ಅವ್ಯವಹಾರ ತಿಳಿದೂ ಸಹ ತರಾತುರಿ ಸಭೆಯ ಬಗ್ಗೆ ಶಾಸಕರು ಹಾಗೂ ಸಮಿತಿಯ ಬಿಜೆಪಿ ಸದಸ್ಯರು ವೈಯಕ್ತಿಕ ಪ್ರತಿಷ್ಠೆ ಮುಂದಿಟ್ಟು ಮುಗ್ದ ರೈತರನ್ನು ಅಲೆದಾಡಿಸುವ ಈ ಧೋರಣೆ ವಿರುದ್ಧ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸುವ ಸಲುವಾಗಿ ತಹಶೀಲ್ದಾರ್ ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಚರ್ಚಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರ ತಂಡ ಸಮಿತಿಯ ಸಭೆಯನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಬಳಕೆ ಆಗದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಸ್ಥಳ ಪರಿಶೀಲನೆ ಮಾಡಿ ಮಂಜೂರು ಮಾಡಬೇಕು. ಸಭೆಯ ನಿಯಮಾವಳಿ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಅನುಭವದಲ್ಲಿರುವ ರೈತರಿಗೆ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಸಮಿತಿಯ ಸದಸ್ಯರ ಬಗ್ಗೆ ಮಾತನಾಡದ ಶಾಸಕರು ಈಗ ಬಿಜೆಪಿ ಸದಸ್ಯರು ಕುತಂತ್ರ ಎಂದು ಹೇಳಿಕೆ ನೀಡಿದ ಶಾಸಕರು ಈ ಮೊದಲು ಮಂಜೂರು ಮಾಡಿದ ತಮ್ಮ ಅಧ್ಯಕ್ಷತೆಯ ಸಮಿತಿ ಬಲಾಢ್ಯರಿಗೆ ಜಮೀನು ಮಂಜೂರು ಮಾಡಿದ್ದು, ಈಗಾಗಲೇ ದೊಡ್ಡ ಭೂ ಹಗರಣ ಆಗಿರುವುದು ಎಲ್ಲರಿಗೂ ತಿಳಿದಿದೆ. ಈಗ ಮೂರು ತಿಂಗಳು ಚುನಾವಣೆ ಎಂದು ಸಭೆ ಕರೆದು ತರಾತುರಿ ಮಂಜೂರು ಅಗತ್ಯವಿಲ್ಲ ಎಂದು ಕಿಡಿಕಾರಿದ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡ ರೈತರಿಗೆ ಅವಕಾಶ ಕೊಟ್ಟಿದ್ದು ಇಲ್ಲಿ ಅದು ದುರ್ಬಳಕೆ ಆಗಿದೆ. ಕಾಂಗ್ರೆಸ್ ಈ ಅನೀತಿ ಧೋರಣೆ ಖಂಡಿಸುತ್ತದೆ. ಈ ಹಿಂದಿನ ಹಗರಣ ತನಿಖೆ ಆಗಬೇಕು ಹಾಗೂ ಸಭೆಯಲ್ಲಿ ಮಂಜೂರು ಮಾಡುವ ಜಮೀನು ಸ್ಥಳ ಪರಿಶೀಲನೆ ಮಾಡಿಯೇ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಈ ಹಿಂದೆ ಮಂಜೂರು ಮಾಡಿದ ಜಮೀನು ಭಾಗಶಃ ಶಾಸಕರ ಹಿಂಬಾಲಕರಿಗೆ ಆಗಿದೆ. ಅರ್ಹರಿಗೆ ಕೆಲವೇ ಮಂದಿಗೆ ಆಗಿದೆ. ಈ ಬಗ್ಗೆ ರಾಜ್ಯವೇ ತಿಳಿದುಕೊಂಡಿದೆ. ವರ್ಷದಿಂದ ನಡೆಯದ ಸಭೆ ಈಗ ದಿಢೀರ್ ಕರೆದಿದ್ದು ಸರಿಯಲ್ಲ. ಶಾಸಕರ ನಡೆ ಎಲ್ಲರಿಗೂ ತಿಳಿಯುತ್ತದೆ. ಈ ಜತೆಗೆ ಬಿಜೆಪಿಯ ಸಮಿತಿ ಸದಸ್ಯರು ಸಹ ಅತಿಯಾಗಿ ನಡೆದುಕೊಂಡು ಅರ್ಹ ರೈತರ ಬದುಕಿನಲ್ಲಿ ಆಟವಾಡುತ್ತಿದ್ದಾರೆ. ರಾಜಕೀಯ ದ್ವೇಷಕ್ಕೆ ರೈತರ ಜಮೀನು ಬೇಕಿತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅರ್ಹರನ್ನು ಗುರುತಿಸಿ ಮಂಜೂರು ಮಾಡುವ ಕೆಲಸ ಅಧಿಕಾರಿಗಳು ಮಾತ್ರ ಮಾಡಿ ಕಾಂಗ್ರೆಸ್ ಸರ್ಕಾರ ಈ ಹಿಂದೆ ಕೊಟ್ಟ ಕೊಡುಗೆ ಸಹಕಾರಗೊಳಿಸಿ ಎಂದು ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಲ್ಲಿ ಮನವಿ ಮಾಡಿದರು.
ಮುಖಂಡ ಬೆಟ್ಟದಹಳ್ಳಿ ಶಶಿಕಿರಣ್ ಮಾತನಾಡಿ ರಾಜಕೀಯ ಸ್ವಾರ್ಥಕ್ಕೆ ಮುಗ್ದ ರೈತರನ್ನು ಮಧ್ಯಕ್ಕೆ ತರಬೇಡಿ. ಸಭೆ ನಡೆಸುವುದಾದರೆ ಶಾಸಕರು ಹಾಗೂ ಸದಸ್ಯರು ಜವಾಬ್ದಾರಿಯಿಂದ ನಡೆಸಬೇಕು. ಅದು ಬಿಟ್ಟು ವೈಯಕ್ತಿಕ ಒಣ ಪ್ರತಿಷ್ಠೆ ಮುಂದಿಟ್ಟು ಒಬ್ಬರ ಮೇಲೊಬ್ಬರು ದೂರುವುದು ಸರಿಯಲ್ಲ. ಇವರ ಮಧ್ಯೆ ಅಧಿಕಾರಿಗಳು ಮೌನ ವಹಿಸುವುದು ಕೂಡಾ ಸರಿಯಲ್ಲ. ಕೂಡಲೇ ನಿಯಮಾನುಸಾರ ಸಭೆ ನಡೆಸಿ, ಸ್ಥಳ ಪರಿಶೀಲನೆ ಮಾಡಿ ಅರ್ಹರ ದಾಖಲೆ ನೋಡಿಯೇ ಮಂಜೂರು ಮಾಡಬೇಕು. ಇಲ್ಲವಾದರೆ ರಾಜಕೀಯಕ್ಕೆ ಅವಕಾಶ ಕೊಡದೆ ಹಿಂದಿನ ಹಗರಣ ತನಿಖೆ ಮೊದಲು ಮಾಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಎಂ.ವಿ.ಶ್ರೀನಿವಾಸ್, ಗೋಪಾಲ್ ಯಾದವ್, ಜಿ.ಎಂ.ಶಿವಾನಂದ್, ಜಿ.ಎಲ್.ರಂಗನಾಥ್, ಸಿದ್ದೇಶ್, ಹೇಮಂತ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ