ವೈದ್ಯಕೀಯ ಸೇವೆಗೆ ಅರ್ಥ ಕೊಟ್ಟ ಉಚಿತ ಮಲ್ಟಿ ಸ್ಪೆಷಾಲಿಟಿ ಶಿಬಿರ : ಡಿಎಚ್ ಓ ಡಾ.ಮಂಜುನಾಥ್.

ಗುಬ್ಬಿ: ಕೊರೋನಾ ಹಿನ್ನಲೆ ಇಡೀ ಜಗತ್ತೇ ತಲ್ಲಣಗೊಂಡ ಈ ಸಮಯದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಆರೋಗ್ಯ ಕಾಪಾಡುವ ಈ ಬೃಹತ್ ಉಚಿತ ಆರೋಗ್ಯ ಶಿಬಿರ ಶ್ರೀ ಗೌರಿಶಂಕರ ಸ್ವಾಮೀಜಿಗಳ ಸ್ಮರಣೆಯಲ್ಲಿ ನಡೆದಿರುವುದು ಅರ್ಥ ಕಲ್ಪಿಸಿದೆ ಎಂದು ಡಿಎಚ್ ಓ ಡಾ.ಮಂಜುನಾಥ್ ಶ್ಲಾಘಿಸಿದರು.

ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಶ್ರೀ ಗೌರಿಶಂಕರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆ ಅಂಗವಾಗಿ ಭಕ್ತ ವೃಂದ ಆಯೋಜಿಸಿದ್ದ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ದಾಸೋಹ ಸೇವೆಗೆ ಮಾನ್ಯತೆ ನೀಡಿ ನಂತರದಲ್ಲಿ ಆರೋಗ್ಯ ಸೇವೆ ಸದ್ಯದ ಅವಶ್ಯ ಎಂದು ಅರಿತ ಶ್ರೀಗಳ ಭಕ್ತ ವೃಂದ ಬೃಹತ್ ಮಟ್ಟದಲ್ಲಿ ಶಿಬಿರ ಆಯೋಜಿಸಿರುವುದು ಸಾರ್ಥಕ ಕೆಲಸ ಎನಿಸಿದೆ ಎಂದರು.

ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯ ನುರಿತ ವೈದ್ಯರ ತಂಡವನ್ನು ಒಂದಡೆ ಸೇರಿಸಿ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ತಾಲ್ಲೂಕಿನ ಬಹುತೇಕ ಜನರು ತಮ್ಮ ಆರೋಗ್ಯ ಬಗ್ಗೆ ಆಸಕ್ತಿ ವಹಿಸಿ ಇಲ್ಲಿ ಅವಶ್ಯ ಚಿಕಿತ್ಸೆ ಪಡೆಯಲು ಎಲ್ಲಾ ರೀತಿಯ ಅನುವು ಮಾಡಿದ್ದಲ್ಲದೆ ದಾಸೋಹ ವ್ಯವಸ್ಥೆ ಮಾಡಿರುವುದು ಸಹ ಈ ತಾಲ್ಲೂಕಿನ ಜನರ ಅದೃಷ್ಟ ಅನ್ನಬಹುದು ಎಂದ ಅವರು ಸರ್ಕಾರ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೌಲಭ್ಯ ನೀಡಿದೆ. ಎಲ್ಲವೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ಹಳ್ಳಿಗೂ ನಮ್ಮ ಸಿಬ್ಬಂದಿ ತಲುಪಿ ಆರೋಗ್ಯ ಜಾಗೃತಿ ಮಾಡಿದ್ದಾರೆ ಎಂದು ತಿಳಿಸಿದರು.

ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ ಗುಬ್ಬಿ ಪಟ್ಟಣದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರ ಪಟ್ಟಣದ ನಾಗರಿಕರಿಗೂ ವರದಾನ ಎನಿಸಿದೆ. ಈಗಾಗಲೇ ಆರೋಗ್ಯದಲ್ಲಿ ಸಾಕಷ್ಟು ವೈಪರಿತ್ಯ ಕಾಣುತ್ತಿದೆ. ಈ ಚಳಿಗಾಲದಲ್ಲಿ ಆರೋಗ್ಯ ನೋಡಿಕೊಳ್ಳುವ ಅವಶ್ಯ ಸಹ ಇದೆ. ಇಂತಹ ಆರೋಗ್ಯ ಶಿಬಿರ ಲಾಭ ಪಡೆದು ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.

ಶಿಬಿರದಲ್ಲಿ ಸಾವಿರಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದಾನ ಶಿಬಿರದಲ್ಲಿ 60 ಮಂದಿ ರಕ್ತ ನೀಡಿದರು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಜಿ.ಆರ್.ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಯ್ಯ, ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್, ಮುಖಂಡ ಹೊಸಹಳ್ಳಿ ಗಿರೀಶ್, ಡಾ.ಅಶ್ವಿನಿ ಜೋಶಿ, ಡಾ.ಪ್ರೀತಿ ಕುಲಕರ್ಣಿ, ಡಾ.ಸುಧೀರ್, ಡಾ.ಅಜಯ್ ಜೋಯಿಸ್, ಡಾ.ಸುರೇಂದ್ರ, ಡಾ.ಉಮೇಶ್ ಹಳ್ಳಿಕೇರಿ, ಮಾದಾಪುರ ಶಿವಪ್ಪ, ಕೆ.ಗಂಗಾಧರ್, ಆಯೋಜಕ ಆದರ್ಶ್ ಇತರರು ಇದ್ದರು.
ವರದಿ:ಹರಿಪ್ರಿಯರಮೇಶ್ ಗೌಡ, ಗುಬ್ಬಿ.

You May Also Like

error: Content is protected !!