ಗುಬ್ಬಿ: ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಅವ್ವೇರಹಳ್ಳಿ ಗ್ರಾಮದ ಶ್ರೀ ನರಸಿಂಹಸ್ವಾಮಿ ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದ ನನ್ನನ್ನು ತೆಗೆದು ಮತ್ತೊಬ್ಬರಿಗೆ ಕೊಡಿಸುವ ಮೂಲಕ ತಮ್ಮ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂದು ಅರ್ಚಕ ಕೃಷ್ಣಮೂರ್ತಿ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಹಿರಿಯರು ನಡೆಸಿಕೊಂಡು ಬಂದ ಅರ್ಚಕ ವೃತ್ತಿ ಮುಂದುವರೆಸಿಕೊಂಡು ಬಂದಿದ್ದೆವು. ಆದರೆ ಸಲ್ಲದ ರಾಜಕಾರಣ ಮುಂದಿಟ್ಟು ನನ್ನನ್ನು ದೇವಾಲಯದಿಂದ ತೆಗೆಯಲು ಹುನ್ನಾರ ನಡೆಸಿ ಅಧಿಕಾರಿಗಳಿಗೆ ಒತ್ತಡ ತಂದು ದೇವಾಲಯದ ಬಾಗಿಲು ಬೀಗ ಒಡೆದು ನಮ್ಮ ವಿರೋಧಿಸಿದವರಿಗೆ ಅರ್ಚಕ ಪೂಜಾ ಹಕ್ಕು ವರ್ಗಾಯಿಸುವುದು ಖಂಡನೀಯ ಎಂದರು.ಮುಜರಾಯಿ ಇಲಾಖೆ ದೇವಾಲಯದಲ್ಲಿ ಅರ್ಚಕರಿಗೆ ನೀಡುವ ತಸ್ತಿಕ್ ಹಣ ಕೂಡಾ ನಮಗೆ ಬರುತ್ತಿದೆ. ನಮ್ಮ ತಂದೆಯವರ ಕಾಲದಿಂದ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಹಕ್ಕು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ ಯೋಗ ನರಸಿಂಹಮೂರ್ತಿ ಹಾಗೂ ಗೋವಿಂದರಾಜು ಅವರಿಗೆ ಪೂಜಾ ಹಕ್ಕು ಕೊಡಿಸಲು ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಏಕಾಏಕಿ ದೇವಾಲಯ ಬಾಗಿಲು ಬೀಗ ಒಡೆದು ಹಕ್ಕು ವರ್ಗಾವಣೆ ಮಾಡುವುದು ಸರಿಯಲ್ಲ. ನಿಯಮಾನುಸಾರ ಮೂರು ಬಾರಿ ನೋಟಿಸ್ ನೀಡಬೇಕಿತ್ತು. ಧನುರ್ಮಾಸ ಪೂಜೆ ಮುಗಿಸಿ ನಾನು ಊರಲ್ಲಿ ಇಲ್ಲದ ವೇಳೆ ಶಿರಸ್ತೇದಾರ್ ಶ್ರೀರಂಗ ಅವರು ದೇವಾಲಯಕ್ಕೆ ಬಂದು ಬೀಗ ಒಡೆದು ಯಾವುದೇ ದಾಖಲೆ ಇಲ್ಲದವರಿಗೆ ಪೂಜಾಹಕ್ಕು ನೀಡಿದ್ದು ಖಂಡನೀಯ. ಇಲ್ಲಿ ಸಲ್ಲದ ರಾಜಕೀಯ ಬೆರೆತಿದ್ದು ದೇವಾಲಯ ಭಕ್ತರಿಗೆ ಬೇಸರ ತಂದಿದೆ ಎಂದರು. ಗ್ರಾಪಂ ಸದಸ್ಯ ಎ.ಕೃಷ್ಣಪ್ಪ ಮಾತನಾಡಿ ರಾಜಕೀಯ ದ್ವೇಷಕ್ಕೆ ದೇವಾಲಯ ಅರ್ಚಕ ಕುಟುಂಬಕ್ಕೆ ತೊಂದರೆ ನೀಡುವ ಮಟ್ಟಕ್ಕೆ ಬರುವುದು ಸರಿಯಲ್ಲ. ಅರ್ಚಕ ವೃತ್ತಿ ನಂಬಿದ ಬಡ ಕುಟುಂಬ ಪರ ನಿಂತು ನ್ಯಾಯಯುತ ನಿಲುವು ತಾಳಬೇಕಿತ್ತು. ಇಡೀ ಗ್ರಾಮವೇ ಈ ಘಟನೆ ಖಂಡಿಸಿದೆ. ಜೆಡಿಎಸ್ ಪರ ಪ್ರಚಾರ ಮಾಡುವೆ ಎಂದು ಸಲ್ಲದ ಆರೋಪ ಮಾಡಿ ಕೃಷ್ಣಮೂರ್ತಿ ಅವರಿಗೆ ತೊಂದರೆ ಕೊಟ್ಟು ಅಧಿಕಾರಿಗಳನ್ನು ಬಳಸಿಕೊಂಡು ಬಾಗಿಲು ಬೀಗ ಒಡೆದು ಯಾವುದೇ ಅರ್ಹತೆ ಇಲ್ಲದವರಿಗೆ ನೀಡಿದ್ದು ಖಂಡನೀಯ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ರಾಮು, ನರಸಿಂಹಮೂರ್ತಿ, ಆನಂದ್, ನರಸಿಂಹಯ್ಯ, ನರಸಿಂಹಮೂರ್ತಿ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.