ಗುಬ್ಬಿ: ಸಮಾನತೆ ಸಾರಿದ ಸಮಾಜದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಣ್ಣು ಮಕ್ಕಳೇ ದಾರಿ ದೀಪವಾಗಿ ಆದ್ಯತೆ ನೀಡಬೇಕು ಎಂದು ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಉನ್ನತ ಸ್ಥಾನಮಾನ ಪಡೆಯುವಲ್ಲಿ ಸಾಧನೆ ಮಾಡಿದ ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಂತಹವರ ಮಾರ್ಗದರ್ಶನ ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳೇ ದೇಶದ ಉನ್ನತ ಸ್ಥಾನಮಾನ ಗಳಿಸಿದ್ದಾರೆ. ಐಎಎಸ್, ಕೆಎಎಸ್ ಹಾಗೂ ಐಪಿಎಸ್ ಅಂತಹ ಸೇವಾ ಅಧಿಕಾರವನ್ನು ಸರ್ಕಾರಿ ಶಾಲೆಯ ಮಕ್ಕಳೇ ಪಡೆದಿರುವುದು ಒಂದಡೆಯಾದರೆ, ಖಾಸಗಿ ಶಾಲೆಯಲ್ಲಿ ಓದಿದ ಮಕ್ಕಳು ಇಂಜಿನಿಯರ್ ಗಳಾಗಿ ದುಡಿಯುವುದು ಅಷ್ಟೇ ಕಲಿತಿದ್ದಾರೆ. ಅವರಲ್ಲಿ ಸೇವಾ ಮನೋಭಾವ ಮಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಮಕ್ಕಳು ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಪೋಷಕರ ಸಹಕಾರ ಹಾಗೂ ಆಸೆಯಂತೆ ಬೆಳೆಯಿರಿ ಎಂದು ಆಶಿಸಿದರು.
ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮಾತನಾಡಿ ಪುರುಷ ಸಮಾಜಕ್ಕೆ ಸಮನಾಗಿ ಬೆಳೆದ ಸ್ತ್ರೀ ಶಕ್ತಿ ಇಂದು ಎಲ್ಲಾ ರಂಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಷ್ಟಕರ ಹುದ್ದೆಗಳನ್ನು ನಿರ್ವಹಿಸುವ ಚಾಕಚಕ್ಯತೆ ಇಂದು ರಾಜಕೀಯ ಕ್ಷೇತ್ರದಲ್ಲೂ ಪ್ರಾಧಾನ್ಯತೆ ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಕುಟುಂಬ ಜೊತೆ ಸಮಾಜ ಕಟ್ಟುವ ಕೆಲಸ ಮಹಿಳೆಯರು ಮಾಡುತ್ತಿರುವುದು ಮೆಚ್ಚುವಂತದ್ದು. ಸಾಧನೆಗೈದ ಹೆಣ್ಣು ಮಕ್ಕಳ ಆದರ್ಶ ಇಂದಿನ ಮಕ್ಕಳು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ ಸಿಗುತ್ತದೆ. ಅರ್ಹ ವಿದ್ಯಾರ್ಹತೆ ಪಡೆದ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಇದ್ದಾರೆ. ಇದರ ಉಪಯೋಗ ಪಡೆದು ಗ್ರಾಮೀಣ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಅನೇಕ ಸೌಲಭ್ಯ ಜೊತೆಗೆ ಮಕ್ಕಳ ಪ್ರತಿಭೆ ಬೆಳಕಿಗೆ ತರಲು ವೇದಿಕೆ ಸಹ ಸೃಷ್ಟಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು ನಡೆಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಂಜುನಾಥ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಎಸ್ ಡಿಎಂಸಿ ಅಧ್ಯಕ್ಷ ಪ್ರಸಾದ್, ಮಾಜಿ ಅಧ್ಯಕ್ಷ ಜಿ.ಆರ್.ರಮೇಶ್, ಸಂಪನ್ಮೂಲ ವ್ಯಕ್ತಿಗಳಾದ ರಮೇಶ್, ಪ್ರಕಾಶ್, ಮುಖ್ಯ ಶಿಕ್ಷಕಿ ವಸಂತಕುಮಾರಿ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ