ಮೂವತ್ತು ವರ್ಷದ ಫಲ ಬಿಟ್ಟ ಹುಣಸೇಮರ ಬುಡಕ್ಕೆ ಬೆಂಕಿ ಇಟ್ಟ ಕಟುಕರು: ಆರೋಪಿಗಳ ಮೇಲೆ ಕಾನೂನು ಕ್ರಮಕ್ಕೆ ಹೇರೂರು ಗ್ರಾಮಸ್ಥರ ಆಗ್ರಹ.

ಗುಬ್ಬಿ: ತಾಲ್ಲೂಕಿನ ಹೇರೂರು ಗ್ರಾಮದ ಡಾಬಾ ಮುಂಭಾಗ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಬದಿಯಲ್ಲಿ ಫಲ ನೀಡುತ್ತಿದ್ದ ಸುಮಾರು ಮೂವತ್ತು ವರ್ಷದ ಹುಣಸೇಮರ ಬುಡಕ್ಕೆ ಬೆಂಕಿ ಹಚ್ಚಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಡಾಬಾ ಮುಂಭಾಗ ನಿವೇಶನದಲ್ಲಿ ಮನೆ ನಿರ್ಮಿಸುತ್ತಿರುವ ರೇಣುಕಪ್ಪ ಅವರು ಮನೆ ಮುಂದಿನ ಹುಣಸೇಮರ ತೆಗೆಯಲು ಅಡಿಕೆ ಸಿಪ್ಪೆ ಸುರಿದು ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ ಸ್ಥಳೀಯ ಗ್ರಾಪಂ ಸದಸ್ಯ ಶ್ರೀನಿವಾಸ್ ಮರದ ಬುಡದಲ್ಲಿ ಗರಗಸದಲ್ಲಿ ಈಗಗಲೇ ಕತ್ತರಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲೇ ತಿಳಿಯುತ್ತದೆ. ದುರುದ್ದೇಶದಲ್ಲಿ ಈ ಮರ ತೆಗೆಯಲು ಮುಂದಾಗಿದ್ದಾರೆ. ಕೇಳಿದರೆ ಉಡಾಫೆ ಉತ್ತರ ಹೇಳುತ್ತಿದ್ದಾರೆ. ಈ ಹಿನ್ನಲೆ ಅವರ ಮೇಲೆಯೇ ದೂರು ಸಲ್ಲಿಸಿದ್ದೇವೆ ಎಂದು ಹೇಳಿದರು.

ಹೆದ್ದಾರಿ ಬದಿ ಅರಣ್ಯ ಇಲಾಖೆ ಪೋಷಿಸಿದ ಹುಣಸೇಮರ ಈಗಾಗಲೇ ಉತ್ತಮ ಫಸಲು ನೀಡುತ್ತಿದೆ. ಮರದಲ್ಲಿ ಫಲ ಕಾಣಿಸುತ್ತಿರುವ ಈ ವೇಳೆ ಕಟುಕತನ ಪ್ರದರ್ಶಿಸಿದ್ದಲ್ಲದೆ ವಿಚಾರ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮುಂಜಾನೆ ವೇಳೆ ಕೊಂಬೆಗಳನ್ನು ಕತ್ತರಿಸಿ ನಂತರ ಮರದ ಬುಡಕ್ಕೆ ಬೆಂಕಿ ಇಟ್ಟಿದ್ದಾರೆ. ಸುಟ್ಟು ಕರಕಲಾದ ಮರದ ಬುಡಕ್ಕೆ ಗರಗಸದಲ್ಲಿ ಅರೆಬರೆ ಕತ್ತರಿಸಲಾಗಿದೆ. ಯಾವುದೇ ಕ್ಷಣದಲ್ಲಾದರೂ ರಸ್ತೆಗೆ ಬಿದ್ದು ಅಪಾಯ ಕಟ್ಟಿಟ್ಟಬುತ್ತಿ. ಇಂತಹ ಕೃತ್ಯ ಮಾಡಿದವರಿಗೆ ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನೂತನ ಮನೆಗೂ ಈ ಮರಕ್ಕೂ ಸುಮಾರು 100 ಮೀಟರ್ ಗೂ ಅಧಿಕ ಅಂತರವಿದೆ. ಮನೆಗೆ ಯಾವುದೇ ತೊಂದರೆ ಇಲ್ಲ. ಅರಣ್ಯ ಇಲಾಖೆಗೆ ಕಣ್ತಪ್ಪಿಸಿ ಹಸನವಾಗಿ ಬೆಳೆದ ಹುಣಸೇಮರ ನಾಶಕ್ಕೆ ಮುಂದಾದವರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಈ ಘಟನೆಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ತಿಳಿಸಿದರು.

ಸ್ಥಳಕ್ಕೆ ವಲಯ ಉಪ ಅರಣ್ಯಾಧಿಕಾರಿ ಸೋಮಶೇಖರ್ ಪರಿಶೀಲಿಸಿ ಮಹಜರು ಕಾರ್ಯ ನಡೆಸಿ ಸ್ಥಳೀಯರು ನೀಡಿದ ದೂರು ಅರ್ಜಿ ಸ್ವೀಕರಿಸಿದರು.

ಸ್ಥಳದಲ್ಲಿ ಗ್ರಾಮಸ್ಥರಾದ ಜಿ.ಕೆ.ಶ್ರೀರಾಮಯ್ಯ, ಬಸವರಾಜು, ರಾಜಶೇಖರ್, ಗಂಗಾಧರ್, ರಮೇಶ್, ರವಿ, ಶ್ರೀನಿವಾಸ್, ಯಶವಂತಕುಮಾರ್ ಇತರರು ಇದ್ದರು.

ವರದಿ: ಹರಿಪ್ರಿಯ ರಮೆಶ್ ಗೌಡ, ಗುಬ್ಬಿ..

You May Also Like

error: Content is protected !!