.*
ಗುಬ್ಬಿ: ಕೃಷಿಯ ಲಾಭ ನಷ್ಟ ಕುರಿತು ರಾಜ್ಯದ ರೈತರೊಂದಿಗೆ ನೇರ ಸಂವಾದ ನಡೆಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಆಯೋಜಿಸಿದ್ದ ‘ರೈತ ಸಂಕ್ರಾಂತಿ’ ನೇರ ಆನ್ ಲೈನ್ ಕಾರ್ಯಕ್ರಮದಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ನೂರಾರು ರೈತರು ಪಾಲ್ಗೊಂಡು ಸಂಕಷ್ಟ ಬಗೆಹರಿಸಲು ಮನವಿ ಮಾಡಿದರು.
ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಆಯೋಜಿಸಿದ್ದ ವಿಡಿಯೋ ಸಂವಾದಕ್ಕೆ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಉದ್ಘಾಟಿಸಿದರು. ಸಂವಾದದ ಅಂಗಳವನ್ನು ಸಂಪೂರ್ಣ ಸುಗ್ಗಿ ಹಬ್ಬವನ್ನು ಬಿಂಬಿಸುವ ರೀತಿ ದವಸ ಧಾನ್ಯಗಳು, ಕಬ್ಬು, ತೆಂಗು, ಬೆಲ್ಲ ಎಲ್ಲವೂ ಅಲಂಕರಿಲಾಗಿತ್ತು.

ಸಂವಾದ ಆರಂಭಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರೈತರು ಈಗಾಗಲೇ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ವಾಣಿಜ್ಯ ಬೆಳೆಗಳ ಧಾರಣೆ ಇಳಿದಿದ್ದು ತೀವ್ರ ಆತಂಕ ಸೃಷ್ಟಿಸಿದೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ರಾಷ್ಟ್ರೀಯ ಪಕ್ಷಗಳು ಕೇವಲ ಚುನಾವಣೆಯ ಬಗ್ಗೆ ಆಲೋಚಿಸಿದೆ. ರೈತರ ಬಗ್ಗೆ ಕಾಳಜಿ ಹೊಂದಿದ ಜೆಡಿಎಸ್ ಪ್ರಾದೇಶಿಕ ಪಕ್ಷ ಮಾತ್ರ ನ್ಯಾಯ ಒದಗಿಸಬಲ್ಲದು. ಭತ್ತ ಕಬ್ಬು ತೊಗರಿ ಕೊಬ್ಬರಿ ಬೆಳೆಯುವ ರೈತರ ಬಗ್ಗೆ ರೈತರಿಂದಲೇ ಸೂಕ್ತ ಸಲಹೆ ಸೂಚನೆ ಪಡೆದು ಕೃಷಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಗುಬ್ಬಿ ತಾಲ್ಲೂಕಿನ ರೈತರ ಪರ ಮಾತನಾಡಿದ ಬಿ.ಎಸ್.ನಾಗರಾಜು ಹಾಗೂ ನಾಗಸಂದ್ರ ವಿಜಯಕುಮಾರ್ ತಾಲ್ಲೂಕಿನ ರೈತರ ಪ್ರಮುಖ ಬೆಳೆ ರಾಗಿ ಮತ್ತು ಕೊಬ್ಬರಿ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಿ ಕೊಡಬೇಕು. ಮಧ್ಯಂತರ ಬೆಳೆ ಮಾವು ಮತ್ತು ಹಲಸು ಬೆಳೆಗೆ ನಮ್ಮಲ್ಲಿ ಸೂಕ್ತ ಮಾರುಕಟ್ಟೆ ಅಗತ್ಯವಿದೆ. ಈ ಜೊತೆಗೆ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವ ಯೋಜನೆ ರೂಪಿಸಿಕೊಟ್ಟು ವಿದ್ಯುತ್ ನೀರಾವರಿ ನೀಡಿದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಸೂಕ್ತ ಉತ್ತರ ನೀಡಿದ ಕುಮಾರಸ್ವಾಮಿ ಅವರು ಈ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡ ಅವರು ಗುಬ್ಬಿ ಕ್ಷೇತ್ರದಿಂದ ಬಿ.ಎಸ್.ನಾಗರಾಜ್ ಅವರನ್ನು ಚುನಾಯಿಸಿ ಕಳುಹಿಸಿಕೊಡಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿವಹಿಸುವೆ ಎಂದು ಸಂವಾದದಲ್ಲಿ ಭಾಗವಹಿಸಿದ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಗಾಯತ್ರಿದೇವಿ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ, ಪಪಂ ಸದಸ್ಯೆ ಸವಿತಾ ಎಸ್.ಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡರಾದ ಅರೇಹಳ್ಳಿ ನಟರಾಜು, ಫಿರ್ದೋಸ್ ಆಲಿ, ಆಟೋ ಮಂಜಣ್ಣ, ಡಿ.ರಘು, ಗಂಗಾಧರ್, ರಂಜಿತ್ ಕಾಳೆನಹಳ್ಳಿ ಸೇರಿದಂತೆ ನೂರಾರು ರೈತ ಮುಖಂಡರು ಭಾಗವಹಿಸಿದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.