ಕಸ ವಿಲೇವಾರಿ ಘಟಕದಲ್ಲಿ ಎರಡನೇ ಬಾರಿ ಕಾಣಿಸಿಕೊಂಡ ಬೆಂಕಿ : ಪರಿಸರಕ್ಕೆ ಪ್ಲಾಸ್ಟಿಕ್ ನ ದಟ್ಟವಾದ ಕೆಟ್ಟ ಹೊಗೆ.

ಗುಬ್ಬಿ: ಗುಬ್ಬಿ ಪಟ್ಟಣದ ಹೊರ ವಲಯದ ಚೇಳೂರು ರಸ್ತೆಯಲ್ಲಿರುವ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದಲ್ಲಿ ಎರಡೇ ಬಾರಿ ಕಂಡ ಬೆಂಕಿ ಇಡೀ ಘಟಕಕ್ಕೆ ಹರಡಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಹೊರಬಂದ ಕೆಟ್ಟ ದಟ್ಟ ಹೊಗೆ ಸುತ್ತಲ ಪರಿಸರಕ್ಕೆ ಹರಡಿತು.

ಅಗ್ನಶಾಮಕದಳ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಆದರೂ ಒಣ ಕಸ ಹಸಿ ಕಸ ಬೇರ್ಪಡಿಸಿದ ಈ ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಾಕಷ್ಟು ಇದ್ದ ಕಾರಣ ದಟ್ಟ ಹೊಗೆ ಕೆಟ್ಟ ವಾತಾವರಣ ಸೃಷ್ಟಿಸಿತು. ಕೆಲ ವರ್ಷಗಳ ಹಿಂದೆ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತಲ ಬಡಾವಣೆಯ ನಿವಾಸಿಗಳ ಆರೋಗ್ಯ ಏರುಪೇರು ಮಾಡಿತ್ತು. ಸಂಪೂರ್ಣ ನಂದಿಸಲು ಮೂರು ದಿನಗಳ ಕಾಲ ಅವಧಿ ಬೇಕಾಗಿತ್ತು.

ನಂತರ ಸ್ಥಳಕ್ಕೆ ಧಾವಿಸಿದ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಕಸ ಬೇರ್ಪಡಿಸುವ ವಿಧಾನ ನಮ್ಮಲ್ಲಿ ಬಳಕೆ ಆಗದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ವಿಫಲವಾಗುತ್ತಿದೆ. ಲಕ್ಷಾಂತರ ಬೆಲೆಯ ಕಸ ಬೇರ್ಪಡಿಸುವ ಯಂತ್ರ ಅಳವಡಿಕೆ ಮಾಡದೆ ಅದು ಸಹ ತುಕ್ಕು ಹಿಡಿದಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಕಸದ ರಾಶಿ ಒಂದೇ ಕಡೆ ಸುರಿದು ಶೇಖರಣೆ ಮಾಡಲಾಗಿದೆ. ಬೇರ್ಪಡಿಸುವ ಪ್ರಕ್ರಿಯೆ ನಡೆದಿಲ್ಲ. ಹಸಿ ಕಸ ಬಳಸಿ ಎರೆಹುಳು ಗೊಬ್ಬರ ತಯಾರಿಕೆಗೆ ಈ ಹಿಂದೆ ತೀರ್ಮಾನಿಸಿ ಯಂತ್ರೋಪಕರಣ ಖರೀದಿಸಲಾಗಿತ್ತು. ಅವುಗಳ ಬಳಕೆ ಮಾಡಿಲ್ಲ. ಈ ಜೊತೆಗೆ ಅಲ್ಲಿದ್ದ ವೇ ಬ್ರಿಡ್ಜ್ ಸಹ ಬಳಕೆಯಾಗದೆ ಹಾಳಾಗಿದೆ ಎಂದು ದೂರಿದರು.

ಕಸ ವಿಂಗಡಿಸಲು ಪ್ರತಿ ಮನೆಗೆ ಸೂಚನೆ ನೀಡಿ ಶೇಖರಣೆಗೆ ಕಸದ ಡಬ್ಬಿಗಳ ವಿತರಣೆ ಮಾಡಲಾಗಿತ್ತು. ಯಾವುದೂ ಬಳಸದೇ ಇಡೀ ಕಾರ್ಯಕ್ರಮ ಫೇಲ್ ಆಗಿದೆ. ಒಣ ಮತ್ತು ಹಸಿ ಕಸಕ್ಕೆ ಬಿದ್ದ ಬೆಂಕಿಗೆ ಅಧಿಕಾರಿಗಳು ಹೊಣೆಯಾಗಬೇಕು ಎಂದು ಪಪಂ ಸದಸ್ಯ ಮಹಮದ್ ಸಾದಿಕ್ ದೂರಿದರು.

ಸ್ಥಳದಲ್ಲಿ ಇಂಜಿನಿಯರ್ ಬಿಂದುಸಾರ, ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!