ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಜನರಲ್ಲಿ ಮನದಟ್ಟು ಮಾಡಲು ವಿಜಯ ಸಂಕಲ್ಪ ಅಭಿಯಾನ : ಗುಬ್ಬಿ ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ.

ಗುಬ್ಬಿ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಈಗಾಗಲೇ ಜನರ ಮನ ಮನೆಗಳ ತಲುಪಿದೆ. ಜನಪ್ರಿಯ ಕಾರ್ಯಕ್ರಮ ಯಶಸ್ವಿಗೊಳಿಸಿದ ಸಾಧನೆಯನ್ನು ಪ್ರತಿ ಮನೆಗೆ ಹೇಳುವ ಮನದಟ್ಟು ಮಾಡುವ ಕೆಲಸಕ್ಕೆ ವಿಜಯ ಸಂಕಲ್ಪ ಅಭಿಯಾನ ಇದೇ ತಿಂಗಳ 21 ರಿಂದ 29 ರವರೆಗೆ ನಡೆಯಲಿದೆ ಎಂದು ಗುಬ್ಬಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು ಇದೇ ತಿಂಗಳ ಮೊದಲ ವಾರ ಬೂತ್ ಮಟ್ಟದ ವಿಜಯ ಅಭಿಯಾನ ಕ್ಷೇತ್ರದ 212 ಬೂತ್ ಗಳ ಪೈಕಿ 199 ಬೂತ್ ಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇದೇ ಮಾದರಿಯಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಸಿ ಬೂತ್ ಮಟ್ಟದ ಗೆಲುವು ಸಾಧಿಸಿ ನಮ್ಮ ಶಾಸಕರ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ಬಿಜೆಪಿ ಸರ್ಕಾರ ನೀಡಿದ ಯೋಜನೆಗಳು ತಲುಪದ ಯಾವ ಮನೆಯೂ ಇಲ್ಲ. ಉಜ್ವಲ ಯೋಜನೆ ಸಂಪೂರ್ಣ ಯಶಸ್ವಿಯಾಗಿ ನಡೆದಿದೆ. ಆರೋಗ್ಯ ಶಿಕ್ಷಣ ಹೀಗೆ ಅನೇಕ ಯೋಜನೆಗಳ ಜೊತೆ ಹತ್ತು ಹಲವು ಕಾರ್ಯಕ್ರಮ ಬಗ್ಗೆ ಪ್ರತಿ ಮನೆಗಳಿಗೆ ತಿಳಿ ಹೇಳಿ ಮತ ಕೇಳುವ ಕಾರ್ಯ ನಡೆಸಲು ಈಗಾಗಲೇ ನಾಲ್ಕು ಸಾವಿರ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದ ಅವರು ನಮ್ಮ ಜಿಲ್ಲೆಗೆ ನೀರಾವರಿಗೆ 253 ಕೋಟಿ ನೀಡಿದ ನಮ್ಮ ಸರ್ಕಾರ ಕೃಷಿ ಸನ್ಮಾನ್ ಯೋಜನೆಯಲ್ಲಿ ರೈತನಿಗೆ ಐದು ವರ್ಷಕ್ಕೆ ಐವತ್ತು ಸಾವಿರ ನೀಡಿದ ಹೆಗ್ಗಳಿಕೆ ಪಡೆದಿದೆ ಎಂದರು.

ಬಿಜೆಪಿ ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಮಾತನಾಡಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಿ ಒಕ್ಕಲಿಗ ಮತ್ತು ಲಿಂಗಾಯಿತ ಜನಾಂಗಕ್ಕೆ ಮೀಸಲಾತಿ ನೀಡಿದ ಏಕೈಕ ಸರ್ಕಾರ ನಮ್ಮ ಬಿಜೆಪಿ ಸರ್ಕಾರ. ಅಹಿಂದ ಜೊತೆಯಲ್ಲೇ ಉತ್ತಮ ಆಳ್ವಿಕೆ ನೀಡಿ ಮತ್ತೊಮ್ಮೆ ಅಧಿಕಾರ ಪಡೆಯುವುದು ಖಚಿತ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಪಡೆ ಸಕಲ ಸಿದ್ಧತೆ ನಡೆಸಿದೆ. ಪಕ್ಷ ತಿಳಿಸಿದ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದಾರೆ ಎಂದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಚುನಾವಣಾ ಪ್ರಚಾರ ಪ್ರಕ್ರಿಯೆ ನಡೆದಂತೆ ಈ ಅಭಿಯಾನ ಆರಂಭಿಸಲಾಗಿದೆ. 21 ರಿಂದ 29 ರವರೆಗೆ ನಡೆದು 29 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಮೂಲಕ ಅಭಿಯಾನಕ್ಕೆ ತೆರೆ ಎಳೆದು ನಂತರ ಕಾರ್ಯಕರ್ತರು ಮಿಂಚಿನ ಸಂಚಾರ ಕ್ಷೇತ್ರದಲ್ಲಿ ನಡೆಸಲಿದ್ದಾರೆ ಎಂದರು.

ಮಾಜಿ ಜಿಪಂ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ಜಲ ಜೀವನ್ ಮಿಷನ್ ಯೋಜನೆ ಈಗಾಗಲೇ ಪ್ರತಿ ಮನೆಯ ಅಂಗಳಕ್ಕೆ ಬಂದಿದೆ. ಈ ಜೊತೆ ಏಕ ರೂಪ ಶಿಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮಲ್ಲಿ ಮಾತ್ರ ಅಳವಡಿಸಿರುವುದು ಸಹ ನಮ್ಮ ಸಾಧನೆಯ ಗರಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಮುಖಂಡರಾದ ಕಾರೇಕುರ್ಚಿ ಸತೀಶ್, ಅರೇನಹಳ್ಳಿ ರಾಜು, ಬಿ.ಲೋಕೇಶ್, ಶ್ರೀಧರ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ

You May Also Like

error: Content is protected !!