ಹೊಸಕೆರೆ : ಒಂಭತ್ತು ತಿಂಗಳ ಮಗುವಿನಲ್ಲೇ ಜಂಗಮರ ದರ್ಶನ ಪಡೆದು, ತಮ್ಮ ಸೊನ್ನಲಿಗೆಯಲ್ಲಿ ಲೋಕೋಪಯೋಗಿ ಕೆಲಸಗಳನ್ನು ಮಾಡಿದವರು ಸಿದ್ಧರಾಮೇಶ್ವರರು ಅವರ ವಚನ ತತ್ವಗಳನ್ನ ಕೇಳುವುದೇ ನಮ್ಮ ಭಾಗ್ಯ ಎಂದು ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಹಾಗಲವಾಡಿ ಹೋಬಳಿಯ ಗವಿ ಮಠ ಬೆಟ್ಟದಹಳ್ಳಿ ಶ್ರೀಮಠದಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಜಂಗಮರ ದರ್ಶನದಿಂದ ಆಗುವ ಪರಿವರ್ತನೆ, ಸಿಗುವ ಸಾಧನೆ ಯಾವ ಪದವಿಯಿಂದಲೂ ಸಿಗಲು ಸಾಧ್ಯವಿಲ್ಲ. ತಾಯಂದಿರು ಹತ್ತರಿಂದ ಹದಿನೈದು ವರ್ಷಗಳೊಳಗಿರುವ ಮಕ್ಕಳಿಗೆ ಸಂಸ್ಕಾರ ಕಲಿಸಿ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬದುಕು ದುಸ್ತರವಾಗಲಿದೆ, ಸಾಕಷ್ಟು ಸಂಪತ್ತಿದ್ದರೂ ಅನುಭವಿಸುವ ಅವಕಾಶವಿಲ್ಲದಂತಾಗುತ್ತದೆ ಜಾಗೃತರಾಗಿರಿ ಎಂದು ಎಚ್ಚರಿಸಿದರು.
ಪೃಥ್ವಿಯ ಗುಣ ಶಾಂತತೆ ಹಾಗೂ ಸಹಿಷ್ಣುತೆ ಅಂತಹುದೇ ಗುಣದಿಂದ ಬದುಕಿ ಮುಂದಿನ ಪೀಳಿಗೆಗೆ ದಾರಿದೀಪವಾಗಿದ್ದಾರೆ ನಮ್ಮ ಗುರುಸಿದ್ಧರಾಮರು ಅವರು ಸದಾ ಚಿರಂಜೀವಿಗಳು, ಅವರ ಆದರ್ಶ ಮಾರ್ಗದರ್ಶನ ನಮ್ಮ ಮಾನವ ಸಂಕುಲಕ್ಕೆ ಅವಶ್ಯಕ, ನಾವು ಅವರ ಆದರ್ಶ ಪಾಲಿಸಿದರೆ ಶಾಂತಿ ನೆಮ್ಮದಿಯಿಂದ ಬದುಕು ಸಾಗಿಸಬಹುದಾಗಿದೆ, ನಾವು ಅವರ ಸಾಮಾಜಿಕ ಕಳಕಳಿ ಪಾಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಮಲ್ಲಿಕಾರ್ಜುನ ವಿದ್ಯಾ ಸಂಸ್ಥೆ ಕಾರ್ಯದರ್ಶಿ ನಿರಂಜನಮೂರ್ತಿ ಖಜಾಂಚಿ ನಂಜುಂಡಪ್ಪ ನಿರ್ದೇಶಕರುಗಳಾದ ಸಿದ್ಧರಾಮಯ್ಯ. ಸದಾಶಿವಯ್ಯ. ರುದ್ರಣ್ಣ ಹಾಗೂ ಶ್ರೀ ಮಠದ ಶಾಲಾ ಮಕ್ಕಳು ಮತ್ತು ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.