ಗುಬ್ಬಿ: ಚುನಾವಣಾ ಸಂದರ್ಭದಲ್ಲಿ ಎಲ್ಲಿಂದಲೂ ಬಂದು ಇಲ್ಲಿನ ಅಮಾಯಕ ಯುವಕರ ಬಳಕೆ ಮಾಡಿಕೊಂಡು ಮದ್ಯ ಕುಡಿಸಿ ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ. ಮತಯಾಚನೆ ಮಾಡಿದ ಅಭಿವೃದ್ದಿ ಕೆಲಸ, ಪಕ್ಷದ ಪ್ರಣಾಳಿಕೆ ಹಿಡಿದು ಕೇಳಬೇಕು. ಸುಖಾಸುಮ್ಮನೆ ಓದುವ ಮಕ್ಕಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿಸಿ ಪೊಲೀಸ್ ಕೇಸ್ ಹಾಕಿಸುವ ಕೆಳಮಟ್ಟದ ರಾಜಕಾರಣ ಮಾಡಬಾರದಿತ್ತು ಎಂದು ಯಾರ ಹೆಸರು ಹೇಳದೇ ಶಾಸಕ ಎಸ್.ಆರ್.ಶ್ರೀನಿವಾಸ್ ನೇರ ವಾಗ್ದಾಳಿ ಮಾಡಿದರು.
ಪಟ್ಟಣದ ಸರ್ಕಲ್ ಬಳಿ ಎಂಜಿ ರಸ್ತೆ ಅಭಿವೃದ್ದಿಗೆ ಪಟ್ಟಣ ಪಂಚಾಯಿತಿ ಎಸ್ ಎಫ್ ಸಿ ವಿಶೇಷ ಅನುದಾನದ 1.15 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಯಾವುದೇ ಚುನಾವಣೆಯಲ್ಲೂ ಇಂತಹ ಕೃತ್ಯ ನಡೆದಿಲ್ಲ. ವೈಯಕ್ತಿಕ ನಿಂದನೆ ಯಾರೋ ಮಾಡಿಲ್ಲ. ನಾನು ಮಾಡಿಲ್ಲ. ಆದರೆ ಎಲ್ಲಿಂದಲೂ ಬಂದು ಹದಿಹರೆಯದ ಮಕ್ಕಳನ್ನು ಬಳಸುವುದು, ಮುಗ್ದರ ಬಳಸಿ ವಿಡಿಯೋ ಮಾಡೋದು ಇದು ಯಾವ ಸಂಸ್ಕೃತಿ. ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ಬಾಲಿಷವಾದುದು. ರಾಜ್ಯಸಭಾ ಚುನಾವಣೆಯಲ್ಲಿ ಹಣ ಇವರು ಕೊಡಿಸಿದ್ದಾರೆಯೇ, ಎಂದೂ ಹಣಕ್ಕೆ ಮಾರು ಹೋಗುವ ಮನುಷ್ಯ ನಾನಲ್ಲ. ದುಡ್ಡಿನ ಹಿಂದೆ ಹೋಗಿದ್ದರೆ ಎಂದೂ ಸಚಿವನಾಗಿರುತ್ತಿದ್ದೆ. ಬೇರೆಯವರ ಹಣದಲ್ಲಿ ಬದುಕುವವನು ನಾನಲ್ಲ. ಸಲ್ಲದ ಹೇಳಿಕೆ ನೀಡಬೇಡಿ ಎಂದು ವಾಗ್ದಾಳಿ ಮಾಡಿದ ಅವರು ಗುಣಕ್ಕೆ ಮತ್ಸರವಿಲ್ಲ. ಯಡಿಯೂರಪ್ಪ ಅವರು ಮಾಸ್ ಲೀಡರ್, ಸಿದ್ದರಾಮಯ್ಯ ಅವರು ಸಹ ಮಾಸ್ ಲೀಡರ್. ಯಡಿಯೂರಪ್ಪ ಅವರ ಹೋರಾಟದ ಬಗ್ಗೆ ಅಪಾರ ಗೌರವವಿದೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿಕೆ ನೀಡುತ್ತಾ ಯಾವ ಪಕ್ಷಕ್ಕೆ ಹೋಗುವಿರಿ ಎನ್ನುವ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.
ಬಹು ನಿರೀಕ್ಷೆ ಇದ್ದ ಪಟ್ಟಣದ ಎಂಜಿ ರಸ್ತೆಗೆ ಕಾಯಕಲ್ಪ ನೀಡಲು 1.15 ಕೋಟಿ ಕೆಲಸ ಸುಮಾರು 800 ಮೀಟರ್ ನಡೆಯಲಿದೆ. ಉಳಿದಂತೆ ರೈಲ್ವೆ ಅಂಡರ್ ಪಾಸ್ ರಸ್ತೆಗೆ ಒಂದು ಭಾಗದಲ್ಲಿ ಒಂದು ಕೋಟಿ ಸಿಸಿ ರಸ್ತೆ ನಿರ್ಮಾಣವಾಗಿದೆ. ಉಳಿದ ಭಾಗಕ್ಕೆ 17 ಲಕ್ಷ ಸದ್ಯ ಹಾಕಿದ್ದು ಕೆಲಸ ಶೀಘ್ರ ನಡೆಯಲಿದೆ ಎಂದ ಅವರು ಎಚ್ ಎ ಎಲ್ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಘಟಕದ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಅದರಂತೆ ಸ್ಥಳೀಯ ಯುವಕರಿಗೆ ಮೊದಲ ಆದ್ಯತೆಯ ಕೆಲಸ ನೀಡಬೇಕು ಎಂದು ಒತ್ತಾಯಿಸಿ, ವರ್ಕ್ ಆರ್ಡರ್ ಇಲ್ಲದೆ ಕೆಲಸಕ್ಕೆ ಪೂಜೆ ನಡೆದಿದೆ ಎನ್ನುವ ಮಾತುಗಳು ಅರ್ಥವಿಲ್ಲದ್ದು. ಎಲ್ಲವೂ ನಿಯಮಾನುಸಾರ ಆರ್ಡರ್ ಆದ ನಂತರವೇ ಕೆಲಸಗಳಿಗೆ ಗುದ್ದಲಿ ಪೂಜೆ ನಡೆಸುತ್ತೇನೆ ಎಂದು ಕೆಲವರ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.

ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ ಸರ್ಕಾರದ ವಿಶೇಷ ಅನುದಾನ ಬಳಸಿ ಗುಬ್ಬಿ ಪಟ್ಟಣವನ್ನು ಸುಂದರ ಹಾಗೂ ಸ್ವಚ್ಚವಾಗಿಡುತ್ತೇವೆ. ಎಲ್ಲಾ ಸದಸ್ಯರು ಒಗ್ಗೂಡಿ ಅಭಿವೃದ್ದಿ ಕೆಲಸವನ್ನು ಅರವತ್ತು ದಿನದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ಮಹಮದ್ ಸಾದಿಕ್, ಶಶಿಕುಮಾರ್, ರಂಗಸ್ವಾಮಿ, ಶೋಕತ್ ಆಲಿ, ಮಂಗಳಮ್ಮ, ಪ್ರಕಾಶ್, ಬಸವರಾಜು, ಜಿಪಂ ಮಾಜಿ ಸದಸ್ಯ ಜಗನ್ನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.