ಗ್ರಾಮೀಣ ಮಕ್ಕಳ ಶಿಕ್ಷಣ ಇಂದಿಗೂ ಉನ್ನತ ಮಟ್ಟದಲ್ಲಿದೆ : ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್.

ಗುಬ್ಬಿ: ಗುಣಮಟ್ಟದ ಶಿಕ್ಷಣ ಸಿಗುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಗ್ರಾಮೀಣ ಮಕ್ಕಳು ಇಂದಿಗೂ ಉನ್ನತ ಸ್ಥಾನಮಾನ ಗಳಿಸಿದ್ದಾರೆ. ಐಎಎಸ್ ಕೆಎಎಸ್ ಪರೀಕ್ಷೆಯ ಫಲಿತಾಂಶದಲ್ಲಿ ಸಹ ಗ್ರಾಮೀಣ ಭಾಗದ ಮಕ್ಕಳೇ ಮೇಲುಗೈ ಸಾಧಿಸುತ್ತಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ತಿಳಿಸಿದರು.

ತಾಲ್ಲೂಕಿನ ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಶಾಲೆಗಳ ಒಗ್ಗೂಡಿಸಿ ಪ್ರಭುವನಹಳ್ಳಿ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ನಮ್ಮೂರು ಶಾಲೆಗೆ ಪ್ರೋತ್ಸಾಹ ನೀಡಿದಲ್ಲಿ ಸರ್ಕಾರಿ ಶಾಲೆಗಳು ಉಳಿಯುತ್ತದೆ. ಈ ಕಾರ್ಯ ಮಾಡಲು ಪೋಷಕರು ಪಣ ತೊಡಬೇಕು ಎಂದರು.

ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿದ್ದಲ್ಲಿ ಉತ್ತಮ ಕ್ರೀಡಾಪಟು, ಕಲೆಗಾರ, ಸಂಗೀತಗಾರ ಹೀಗೆ ಎಲ್ಲಾ ಕ್ಷೇತ್ರದ ಪ್ರತಿಭೆ ಸಿಗುತ್ತದೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಕೆಲಸ ಸ್ಥಳೀಯ ಜನ ಪ್ರತಿನಿಧಿಗಳು ಮಾಡಬೇಕು. ಶಿಕ್ಷಕ ವರ್ಗಕ್ಕೆ ಸಹಕಾರ ನೀಡಿ ಸರ್ಕಾರಿ ಶಾಲೆ ಉಳಿಸೋಣ ಎಂದು ಕರೆ ನೀಡಿದರು.

ಕಲಿಕಾ ಹಬ್ಬದಲ್ಲಿ ಮಕ್ಕಳು ತೋರಿದ ಕೌಶಲ್ಯ ಬೆರಗಾಗುವಂತೆ ಮಾಡಿತು. ಕ್ರಿಯಾತ್ಮಕ ಚಟುವಟಿಕೆ ಪತ್ಯೇತರವಾಗಿ ನಡೆದಲ್ಲಿ ಮಕ್ಕಳ ಮನಸ್ಥಿತಿ ಉತ್ತಮಗೊಳ್ಳುತ್ತದೆ. ಪ್ರತಿಭಾ ಕಾರಂಜಿ, ಟಿ ಎಂ ಎಲ್ ಮೇಳ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಸೂಕ್ತ ವೇದಿಕೆ ಆಗಲಿದೆ. ಅಲ್ಲಿನ ಮಕ್ಕಳ ಪ್ರತಿಭೆಗೆ ಮತ್ತಷ್ಟು ತರಬೇತಿ ನೀಡಲು ಶಿಕ್ಷಣ ಇಲಾಖೆ ಸಹಕಾರ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳೇ ತಯಾರಿಸಿದ ಕಾಗದದ ಕಿರೀಟ ಧರಿಸಿ ಸ್ಥಳೀಯ ಎಲ್ಲಾ ಮುಖಂಡರು ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳು ತಾವು ತಯಾರಿಸಿದ ವಿವಿಧ ಕೌಶಲ್ಯ ಪ್ರದರ್ಶನ ಮಾಡಿದರು.

ವೇದಿಕೆಯಲ್ಲಿ ಗ್ರಾಪಂ ಸದಸ್ಯ ರಾಜು, ಎಸ್ ಡಿ ಎಂ ಸಿ ಅಧ್ಯಕ್ಷ ಗುರುಲಿಂಗಯ್ಯ, ಮುಖಂಡರಾದ ರುದ್ರೇಶ್, ಶ್ರೀನಿವಾಸ್, ಉಮೇಶ್, ಶಿಕ್ಷಣ ಇಲಾಖೆಯ ಲೋಕೇಶ್ ಸೇರಿದಂತೆ 13 ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!