ಗುಬ್ಬಿ: ಕುರಿ ಮೇಕೆ, ಸಾಕು ನಾಯಿಗಳ ಬೇಟೆಯಾಡುತ್ತಾ ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ತಡರಾತ್ರಿ ಸೆರೆಯಾಗಿದೆ.
ಚಿರತೆ ಓಡಾಟದ ಜಾಡು ಹಿಡಿದು ಬೋನ್ ಅಳವಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಶನಿವಾರ ರಾತ್ರಿ ಯಶಸ್ವಿಯಾಗಿದೆ. ಒಂದು ತಿಂಗಳಿಂದ ಲಕ್ಷಾಂತರ ಬೆಲೆ ಬಾಳುವ ಕುರಿಗಳು, ಮೇಕೆಗಳನ್ನು ಆಹಾರ ಮಾಡಿಕೊಂಡಿದ್ದ ಗಂಡು ಚಿರತೆ ಈ ಭಾಗದಲ್ಲಿ ರಾಜಾರೋಷವಾಗಿ ಓಡಾಡುತ್ತಿತ್ತು. ಹಗಲು ವೇಳೆಯಲ್ಲೇ ಹಲವು ರೈತರಿಗೆ ಕಾಣಿಸಿಕೊಂಡು ಓಡಾಡುತ್ತಾ ರಾತ್ರಿ ವೇಳೆ ಕುರಿ ರೊಪ್ಪಕ್ಕೆ ನುಗ್ಗುತಿತ್ತು.
ಚಿರತೆಯ ಉಪಟಳಕ್ಕೆ ಬೇಸತ್ತ ಸ್ಥಳೀಯರು ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು. ಕಡಬ, ಕಸಬಾ ಹೋಬಳಿಯ ಕೆಲ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆಗಳು ಹಗಲಿನಲ್ಲಿ ಸಂಚಾರ ಮಾಡಿರುವುದು ಆತಂಕ ಮೂಡಿಸಿದೆ. ಕೃಷಿ ಚಟುವಟಿಕೆಗೆ ರೈತರು ತಮ್ಮ ತೋಟ ಹೊಲಗಳಿಗೆ ತೆರಳಲು ಭಯ ಪಡುವಾಂತಾಗಿತ್ತು.
ಸದ್ಯ ನಿಟ್ಟುಸಿರು ಬಿಟ್ಟ ಮಡೇನಹಳ್ಳಿ ಗ್ರಾಮಸ್ಥರು ಚಿರತೆ ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರ.
ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಹಲವು ಚಿರತೆಗಳಿದ್ದು ಅರಣ್ಯ ಇಲಾಖೆ ಈ ಚಿರತೆಗಳ ಉಪಟಳವನ್ನು ತಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.