ಗುಬ್ಬಿ: ಜಮ್ಮು ಕಾಶ್ಮೀರದಲ್ಲಿ 9ನೇ ಪ್ಯಾರಾ ಮಿಲಿಟರಿಯ ವಿಶೇಷ ಉಗ್ರಗಾಮಿ ನಿಗ್ರಹ ಪಡೆಯ ಕ್ಯಾಪ್ಟನ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ತೋರೆಹಳ್ಳಿ ಗ್ರಾಮದ ಟಿ.ಆರ್.ರಾಕೇಶ್ (29) ಅವರಿಗೆ 2023 ನೇ ಸಾಲಿನ ಶೌರ್ಯ ಚಕ್ರ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷದ ಏಪ್ರಿಲ್ ಮಾಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮುವಿಗೆ ಸಾರ್ವಜನಿಕ ಸಭೆಗೆ ಆಗಮಿಸುವ ಸಂದರ್ಭದಲ್ಲಿ ಭಯೋತ್ಪಾದಕ ಸಂಘಟನೆಯೊಂದು ಆತ್ಮಾಹುತಿ ದಾಳಿಗೆ ತಯಾರಾಗಿದ್ದ ಮಾಹಿತಿ ತಿಳಿದು ಉಗ್ರರು ಅಡಗಿರುವ ಅರಣ್ಯ ಪ್ರದೇಶವನ್ನು ಸುತ್ತುವರಿದ ಸೇನಾ ಪಡೆ ಯೋಧರು ಉಗ್ರರ ಮೇಲೆ ನಡೆಸಿದ ಗುಂಡಿನ ದಾಳಿಲ್ಲಿ ತನ್ನ ಪ್ರಾಣದ ಹಂಗು ತೊರೆದು ಇಬ್ಬರು ಉಗ್ರರನ್ನು ಹತ್ಯೆಗೈದು ತಮ್ಮ ಶೌರ್ಯ ಪ್ರದರ್ಶಿಸಿದ್ದ ರಾಕೇಶ್ ರವರು ಈ ಪಡೆಯ ಮುಖ್ಯಸ್ಥರಾಗಿದ್ದರು.
ಉಗ್ರರ ಸದೆಬಡಿದ ಈ ಸಾಹಸ ಗುರುತಿಸಿ ಟಿ.ಆರ್.ರಾಕೇಶ್ ಅವರಿಗೆ ಈ ಸಾಲಿನ ಶೌರ್ಯ ಚಕ್ರ ಪ್ರಶಸ್ತಿಯನ್ನು ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ದೇಶವೇ ಮೆಚ್ಚುವ ಕೆಲಸ ಮಾಡಿದ ಯುವಕ ಯೋಧ ರಾಕೇಶ್ ಗುಬ್ಬಿ ತಾಲ್ಲೂಕಿನ ತೊರೇಹಳ್ಳಿ ಗ್ರಾಮದ ರೈತ ರಾಜ್ ಕುಮಾರ್, ತಾಯಿ ಭಾಗ್ಯಮ್ಮ ಅವರ ಸುಪುತ್ರ. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಪಡೆದು ನಂತರ ಬೆಂಗಳೂರಿನಲ್ಲಿ ಶಿಕ್ಷಣ ಮುಂದುರೆಸುವ ಸಮಯದಲ್ಲಿ ಎನ್.ಸಿ.ಸಿ ಸೇರಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಚಿನ್ನದ ಪದಕ ಪಡೆದಿದ್ದ ಇವರು 2016 ರಲ್ಲಿ ಪ್ಯಾರ ಚೂಟ್ ರೆಜಿಮೆಂಟ್ ನ 9 ನೇ ಬೆಟಾಲಿಯನ್ ಸೇರಿದ್ದರು.
ಎಂಸಿಎ ಉನ್ನತ ಶಿಕ್ಷಣ ಪಡೆದು ನಂತರ ಪ್ಯಾರಾ ಮಿಲಿಟರಿ ಸೇರಿ ಇಂದು 29 ವರ್ಷಕ್ಕೆ ದೇಶ ನೋಡುವ ಸಾಹಸ ತೋರಿರುವುದು ತಾಲ್ಲೂಕಿನ ಜನತೆ ಹೆಮ್ಮೆ ಪಡುವ ವಿಚಾರವಾಗಿದೆ.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.