ಸರ್ವ ಶ್ರೇಷ್ಠ ಸಂವಿಧಾನ ರಚಿಸಿದವರ ಸ್ಮರಣೆ ಎಲ್ಲರ ಕರ್ತವ್ಯ : ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ.

ಗುಬ್ಬಿ : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂಬ ಮಹತ್ವ ನಿಲುವಿನಲ್ಲಿ ರಚನೆಯಾದ ಸಂವಿಧಾನ ವಿಶ್ವದಲ್ಲೇ ಸರ್ವ ಶ್ರೇಷ್ಠ ಎನಿಸಿದೆ. ಇಂತಹ ಪವಿತ್ರ ಸಂವಿಧಾನ ಜಾರಿ ಗಣ ರಾಜ್ಯೋತ್ಸವ ದಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣೆ ಎಲ್ಲರ ಕರ್ತವ್ಯ ಎಂದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾನತೆ ಸಾರುವ ಸಂವಿಧಾನ ಕಾನೂನು ಬದ್ಧತೆಯಲ್ಲಿ ನಡೆಸಲು ಪ್ರಮುಖ ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗ ಮೂರು ಅಂಗಗಳು ರಚನೆ ಮಾಡಲಾಯಿತು. ಅದರಂತೆ ಇಂದು ದೇಶ ಶಾಂತಿಯಿಂದ ಅತ್ಯುತ್ತಮ ಆಡಳಿತ ಮೂಲಕ ವಿಶ್ವದಲ್ಲಿ ಗುರುತಿಸಿಕೊಂಡಿದೆ ಎಂದರು.

ಸಂವಿಧಾನ ಪ್ರತಿ ವ್ಯಕ್ತಿಗೆ ಸ್ವತಂತ್ರ ನೀಡಿದೆ. ಆದರೆ ಆರೋಗ್ಯ ಸಮಾಜ ನಿರ್ಮಾಣಕ್ಕೆ ಅಗತ್ಯ ಕಾನೂನು ಮೂಲಕ ನಮ್ಮದೇ ಕೆಲ ಚೌಕಟ್ಟು ನೀಡಿದ ಸಂವಿಧಾನ ಇಡೀ ದೇಶವೇ ಒಪ್ಪುವ ಪ್ರಜಾಪ್ರಭುತ್ವ ಆಡಳಿತ ಕೊಟ್ಟಿದೆ. ಈ ಪೈಕಿ ಶಿಕ್ಷಣಕ್ಕೆ ಬಹಳ ಮಹತ್ವ ನೀಡಿದ್ದು, ಮುಂದುವರೆಯುತ್ತಿರುವ ನಮ್ಮ ರಾಷ್ಟ್ರ ಮುಂದುವರೆದ ರಾಷ್ಟ್ರ ಎನಿಸಿಕೊಳ್ಳಲು ಶಿಕ್ಷಣವೇ ಬಹು ಮುಖ್ಯ ಮಾರ್ಗ ಎನ್ನುವ ಮಹತ್ವ ನೀಡಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ನಮ್ಮ ಮೂಲಭೂತ ಹಕ್ಕು ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮುಂದಿನ ಪೀಳಿಗೆ ಮಹತ್ವ ನೀಡಬೇಕು ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಬಿ.ಆರತಿ ಮಾತನಾಡಿ, ಸಂವಿಧಾನ ಗಣತಂತ್ರ ಮೂಲಕ ಇಡೀ ದೇಶ ಮುನ್ನಡೆಸಲಾಗಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ನಂತರದಲ್ಲಿ ವಿಶ್ವವೇ ಮೆಚ್ಚುವ ಪ್ರಜಾ ಪ್ರಭುತ್ವ ಆಳ್ವಿಕೆಗೆ ಬುನಾದಿ ಹಾಕಿದ ನಮ್ಮ ಸಂವಿಧಾನ ಇಡೀ ಸಮಾಜದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮಹತ್ವ ತಿಳಿಸಿದೆ. ಅದರಂತೆ ಪ್ರಜೆಗಳಿಗಾಗಿ ಪ್ರಜೆಗಳಿಂದ ಆಯ್ಕೆ ಮಾಡುವ ಮತದಾನ ಹಕ್ಕು ನಮ್ಮ ಸಂವಿಧಾನ ನೀಡಿದೆ. ಮತದಾನದ ಮಹತ್ವ ಅರಿತು ಜನ ಜಾಗೃತಿಗೊಳ್ಳಬೇಕು. ಯುವಕರಲ್ಲಿ ಮತದಾನ ಬಗ್ಗೆ ಅರಿವು ಮೂಡಿಸಲು ಮತದಾರರ ದಿನವನ್ನು ಸಹ ಆಚರಿಸಿದ್ದೇವೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ಕೆ.ರಮ್ಯಾ ಮಾತನಾಡಿ ಸಂವಿಧಾನ ರಚನೆ ಅದರ ಮಹತ್ವ ಹಾಗೂ ಕಾರ್ಯತಂತ್ರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ನೀಡಲಾಯಿತು. ಗ್ರಾಮ ಒನ್ ಕೇಂದ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಸೇರಿದಂತೆ ಎಲ್ಲಾ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜಿ.ಕೆ.ಪರಮೇಶ್ವರಪ್ಪ ಇತರರು ಇದ್ದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಧ್ವಜಾರೋಹಣ ನಂತರ ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತು ನಡೆಸಲಾಯಿತು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!