ಗುಬ್ಬಿ: ರಾಜ್ಯದ 80 ಲಕ್ಷಕ್ಕೂ ಅಧಿಕ ಮುಸಲ್ಮಾನರನ್ನು ಕಾಂಗ್ರೆಸ್ ಪಕ್ಷ ಗುಲಾಮರು ಎಂದು ತಿಳಿದಿದೆ. ಯಾವ ರೀತಿ ಉಪಕಾರ ಮಾಡದೆ ಕೇವಲ ಓಟ್ ಬ್ಯಾಂಕ್ ಎಂದು ತಿಳಿದಿರುವ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಸ್ಥಾನಕ್ಕೆ ಆಂತರಿಕ ಕಿತ್ತಾಟವಷ್ಟೇ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಮುಖಂಡ ಸಲೀಂಪಾಷ ನೇರ ಟೀಕೆ ಮಾಡಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸಲೀಂಪಾಷ ಅವರು ಜೆಡಿಎಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆಗೊಂಡು ನಂತರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ನಾಯಕರನ್ನು ಡಿಸಿಎಂ ಮಾಡುವ ಒಂದು ಹೇಳಿಕೆ ನೀಡಿಲ್ಲ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಯಾವ ಮುಸ್ಲಿಂ ಶಾಸಕರು ಪ್ರಚಲಿತಕ್ಕೆ ಬಂದಿಲ್ಲ. ಇವೆಲ್ಲಾ ಬೆಳವಣಿಗೆ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ ಎಂದರು.ರಾಷ್ಟ್ರೀಯ ಪಕ್ಷಗಳ ಆಡಳಿತಕ್ಕೆ ಬೇಸತ್ತ ಜನತೆ ಈಗಾಗಲೇ ಸಾಕಷ್ಟು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಿದ್ದಾರೆ. ನಮ್ಮ ರಾಜ್ಯದಲ್ಲೂ ಸಹ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮುಸಲ್ಮಾನರ ರಕ್ಷಣೆ ಮಾಡುವ ಏಕೈಕ ಪಕ್ಷ ಜೆಡಿಎಸ್ ಆಗಿದೆ ಎಂದ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಹತ್ವದ ಪಂಚರತ್ನ ಯೋಜನೆ ಜನರ ಮನಸ್ಸಿಗೆ ತಲುಪಿದೆ. ಜೆಡಿಎಸ್ ಪಕ್ಷ ಸಿದ್ದಾಂತ ಒಪ್ಪಿ ಇಂದು ಪಕ್ಷಕ್ಕೆ ಮರು ಸೇರ್ಪಡೆ ಆಗಿದ್ದೇನೆ. ಈ ಹಿಂದೆ ಜೆಡಿಎಸ್ ಸೇರ್ಪಡೆಯಾಗಿ ಸ್ಥಳೀಯ ಕೆಲ ಮುಖಂಡರ ವರ್ತನೆಯಿಂದ ಬೇಸತ್ತು ಕಾಂಗ್ರೆಸ್ ಗೆ ಮರಳಿದ್ದೆ. ಪ್ರಸ್ತುತ ಗುಬ್ಬಿ ಶಾಸಕರು ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ದಿ ಶೂನ್ಯಗೊಳಿಸಿ ನಂತರ ಸ್ವಪಕ್ಷದಿಂದ ಆಚೆ ಹಾಕಿಸಿಕೊಂಡು ಈಗ ಕಾಂಗ್ರೆಸ್ ನತ್ತ ಬರುತ್ತಿದ್ದಾರೆ. ಟಿಕೆಟ್ ಅರ್ಜಿ ಕೂಡಾ ಸಲ್ಲಿಸದ ಶಾಸಕರ ಬಗ್ಗೆ ಕಾಂಗ್ರೆಸ್ ರಾಜ್ಯ ಮತ್ತು ಜಿಲ್ಲಾ ಮುಖಂಡರು ಅವರ ಆಹ್ವಾನ ಬಗ್ಗೆ ಹೇಳಿಕೆ ನೀಡುತ್ತಾರೆ. ಇವೆಲ್ಲಾ ವರ್ತನೆ ಕಂಡು ಬೇಸತ್ತು ಜೆಡಿಎಸ್ ಬಂದಿರುವುದಾಗಿ ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ ಮುಸ್ಲಿಂ ನಾಯಕರೊಬ್ಬರು ಕಾಂಗ್ರೆಸ್ ತೊರೆದು ಜೆಡಿಎಸ್ ಸಿದ್ದಾಂತ ಒಪ್ಪಿ ಬಂದಿರುವುದು ಸಂತಸ ತಂದಿದೆ. ಹಲವು ತಿಂಗಳಿಂದ ಸಾವಿರಾರು ಕಾರ್ಯಕರ್ತರು ಈಗಾಗಲೇ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇನ್ಮುಂದೆ ಸೇರ್ಪಡೆ ಪರ್ವ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಹಲವಾರು ಶಕ್ತಿಯುತ ಮುಖಂಡರು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಜೆಡಿಎಸ್ ನತ್ತ ಬರಲಿದ್ದಾರೆ ಎಂದು ಮಾರ್ಮಿಕವಾಗಿ ಸೇರ್ಪಡೆ ಪರ್ವ ನಿರಂತರ ಮಾಡುವ ಬಗ್ಗೆ ಸುಳಿವು ನೀಡಿದರು.14 ತಿಂಗಳು ಸಚಿವರನ್ನಾಗಿ ಮಾಡಿದ ಕುಮಾರಣ್ಣ ಅವರ ಬಗ್ಗೆ ಅಸಭ್ಯವಾಗಿ ಮಾತನಾಡಿ ಪಕ್ಷ ದ್ರೋಹ ಮಾಡಿದ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಅವರ ಅಧಿಕಾರಕ್ಕೆ ಮಾತ್ರ ಇನ್ನೂ ಅಲ್ಲಿಯೇ ಉಳಿದ ಸಾಕಷ್ಟು ಮಂದಿ ತೀರ್ಮಾನ ಅಚ್ಚರಿ ತರಲಿದೆ ಎಂದ ಅವರು ಅಭಿವೃದ್ದಿ ಕೆಲಸ ತಿಳಿಸಲಾಗದೆ ಕುಕ್ಕರ್ ಆಮಿಷ ನಡೆಸಿರುವ ಶಾಸಕರು ರಾಜೀನಾಮೆ ಡಿಸೆಂಬರ್, ಜನವರಿ ಅಂದು ಈಗ ಬಜೆಟ್ ಅಧಿವೇಶನ ನಂತರ ಅನ್ನುತ್ತಿದ್ದಾರೆ. ಅಧಿಕಾರ ಅವಧಿ ಅಂತ್ಯದ ವೇಳೆ ಎಲ್ಲರೂ ರಾಜೀನಾಮೆ ಪರ್ವ ನಡೆಸುತ್ತಾರೆ. ಇವೆಲ್ಲವೂ ಗೊಂದಲ ಸೃಷ್ಠಿಸುವ ಹೇಳಿಕೆಯಷ್ಟೇ ಎಂದು ಕಿಡಿಕಾರಿದರು.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ ಮಾತನಾಡಿ ಮುಸ್ಲಿಂ ಸಮುದಾಯ ಜೆಡಿಎಸ್ ಅಪ್ಪಿಕೊಳ್ಳುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ. ಇದೇ ಮಾದರಿಯಲ್ಲಿ ಕಾಂಗ್ರೆಸ್ ತೊರೆದ ಸಲೀಂಪಾಷ ಕೂಡಾ ಗುಬ್ಬಿಯಲ್ಲಿ ಜೆಡಿಎಸ್ ಪರ ನಿಂತು ಗೆಲುವಿಗೆ ಸಹಕಾರಿಯಾಗಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ನಾಗಸಂದ್ರ ವಿಜಯಕುಮಾರ್, ಡಿ.ರಘು, ಪ್ರೇಮ್, ಕಾಂತರಾಜು, ಗಂಗಾಧರ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.