ಸ್ವಾತಂತ್ರ್ಯ ತಂದು ಹುತಾತ್ಮರಾದ ರಾಷ್ಟ್ರಪಿತ ಗಾಂಧೀಜಿ : ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ.

ಗುಬ್ಬಿ: ಮಹಾತ್ಮ ಗಾಂಧೀಜಿ ಅವರ ಶಾಂತಿ ಹೋರಾಟದ ಫಲ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ನಂತರದಲ್ಲಿ ಹುತಾತ್ಮರಾದ ಅವರ ಸ್ಮರಿಸಲು ಸರ್ಕಾರ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಲು ಸೂಚಿಸಿರುವುದು ಸ್ವಾಗತಾರ್ಹ ಎಂದು ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧೀಜಿ ಸ್ಮರಣೆಯ ಹುತಾತ್ಮರ ದಿನ ಆಚರಣೆಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ದೇಶಭಕ್ತಿ ಎನ್ನುವುದು ಹೇಳಿಸಿಕೊಂಡು ಬರುವುದಲ್ಲ. ದೇಶಾಭಿಮಾನ ಕಣ ಕಣದಲ್ಲಿ ಇರಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯ ಪಡೆದ ನಂತರ ದೇಶದ ಲಾಂಛನ, ಗೀತೆ, ರಾಷ್ಟ್ರ ಧ್ವಜ ಹೀಗೆ ಎಲ್ಲವೂ ರಚಿಸಿಕೊಂಡ ನಾವುಗಳು ಅವುಗಳಿಗೆ ನೀಡಬೇಕಾದ ಗೌರವ ನೀಡುವುದು ಸಹ ಕರ್ತವ್ಯವಾಗಿದೆ ಎಂದ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ನಮ್ಮ ಕಚೇರಿಯಲ್ಲಿ ನಡೆದಿರುವುದು ಬೇಸರ ಸಂಗತಿ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸರ್ಕಾರದ ಆದೇಶದಂತೆ ಹುತಾತ್ಮರ ದಿನ ಆಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸುವ ಕೆಲಸ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಅದರಂತೆ ಕಾರ್ಯಕ್ರಮಕ್ಕೆ ಸಕಾಲಕ್ಕೆ ಆಗಮಿಸಿದ ನಿವೃತ್ತ ಯೋಧರಿಗೆ ಕನಿಷ್ಠ ಸೌಜನ್ಯ ತೋರದ ಸಿಬ್ಬಂದಿಗಳ ವರ್ತನೆ ಸರಿಯಲ್ಲ ಎಂದು ವಿಷಾದಿಸಿದರು.

ನಿವೃತ್ತ ಯೋಧರಾದ ಜಯದೇವಪ್ಪ, ಮಹಾಲಿಂಗಪ್ಪ ಮತ್ತು ಸುದರ್ಶನ ತಮ್ಮ ಸೇನೆಯ ಅನುಭವ ಹಂಚಿಕೊಂಡರು. ನಂತರ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯರಾದ ಬಸವರಾಜು, ಜಿ.ಆರ್.ಪ್ರಕಾಶ್, ಮುಖ್ಯಾಧಿಕಾರಿ ಮಂಜುಳಾದೇವಿ, ಕಂದಾಯ ನಿರೀಕ್ಷಕ ನಾಗೇಶ್, ಇಂಜಿನಿಯರ್ ಬಿಂದುಸಾರ, ಸಿಬ್ಬಂದಿಗಳಾದ ಅಂತರಾಜು, ವಿದ್ಯಾಶ್ರೀ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!