ಗುಬ್ಬಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಿದ್ಧತೆ ಕುರಿತು 18 ಕೋಮಿನ ಮುಖಂಡರ ಜೊತೆ ಪೂರ್ವ ತಯಾರಿ ಸಭೆ.

ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರೆಯು ಫೆಬ್ರವರಿ 25 ರಿಂದ ಆರಂಭವಾಗಿ ಮಾರ್ಚ್ 19 ರವರೆಗೆ ನಡೆಯಲಿದ್ದು, ಇದರ ಪೂರ್ವಸಿದ್ಧತೆ ಕುರಿತು ದೇವಾಲಯದ ಆಡಳಿತಾಧಿಕಾರಿ ಉಪ ವಿಭಾಗಾಧಿಕಾರಿ ಜಿ.ಆರ್.ನಟರಾಜ್ ಅವರ ನೇತೃತ್ವದಲ್ಲಿ ನಡೆಯಿತು.

ಪ್ರತಿ ವರ್ಷದಂತೆ ಜಾತ್ರೆಯು ಧಾರ್ಮಿಕ ವಿಧಿವತ್ತಾಗಿ ಜರುಗಲಿದೆ. ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಜಾತ್ರೆಯ ಸಿದ್ಧತೆ, ಕುಂದು ಕೊರತೆ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಯಿತು. ಫೆಬ್ರವರಿ 25 ರಂದು ಧ್ವಜಾರೋಹಣ ಮೂಲಕ ಆರಂಭವಾದ ಜಾತ್ರೆಯಲ್ಲಿ ಮಾರ್ಚ್ 1 ರಂದು ರಥೋತ್ಸವ ಹಾಗೂ ಮಾರ್ಚ್ 7 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ನಿಟ್ಟಿನಲ್ಲಿ ಸಾವಿರಾರು ಭಕ್ತರು ಆಗಮಿಸಲಿದ್ದು ಸಕಲ ಸಿದ್ಧತೆ ಮಾಡುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ರಥದ ದೃಢತೆ ಬಗ್ಗೆ ದೃಢೀಕರಣ ಪತ್ರ ಲೋಕೋಪಯೋಗಿ ಇಲಾಖೆ ನೀಡಲಿದೆ. ಜಾತ್ರೆಯ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಎಚ್ಚರಿಕೆ ವಹಿಸಲು ಬೆಸ್ಕಾಂ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು.

ಪ್ರಮುಖವಾಗಿ ಜಾತ್ರೆಯ ರಥೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ದಿನದಂದು ಬಿಗಿ ಭದ್ರತೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸೂಚಿಸಲಾಗಿದ್ದು, ಹೆಚ್ಚಿನ ಸಿಬ್ಬಂದಿಗೆ ಬೇರೆ ಪೊಲೀಸ್ ಠಾಣೆಯ ಸಂಪರ್ಕ ಹಾಗೂ ಗೃಹ ರಕ್ಷಕ ದಳ ಬಳಸಿಕೊಳ್ಳಲು ಸೂಚಿಸಲಾಯಿತು. ದೇವರ ಚಿನ್ನಾಭರಣ ರಕ್ಷಣೆಗೆ ಸಿಬ್ಬಂದಿ ನೇಮಕ ಹಾಗೂ ಸಿ.ಎಸ್. ಪುರ ಮಾರ್ಗ ತಾತ್ಕಾಲಿಕ ಬದಲಾವಣೆ ಮಾಡಲು ನಿರ್ಧರಿಸಲಾಯಿತು. ಆರೋಗ್ಯ ಇಲಾಖೆ ಪ್ರಸಾದ ತಪಾಸಣೆ, ಶುದ್ಧ ನೀರು ಪರೀಕ್ಷೆ, ತುರ್ತು ಚಿಕಿತ್ಸೆ ಮತ್ತು ಕರೋನ ಮುನ್ನೆಚ್ಚರಿಕೆ ಕ್ರಮ ಹಾಗೂ ಸಂಚಾರಿ ಕ್ಲಿನಿಕ್ ತೆರೆಯುವ ಬಗ್ಗೆ ಚರ್ಚಿಸಲಾಯಿತು. ದಾಸೋಹ ವ್ಯವಸ್ಥೆ ಬಗ್ಗೆ ಸಮಿತಿಯು ಕೈಗೊಳ್ಳುವ ಕಾರ್ಯಕ್ರಮ ತಿಳಿಸಿದರು. ಭಕ್ತಾದಿಗಳಿಂದ ದೇಣಿಗೆ ಸಂಗ್ರಹಿಸಿ ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಚತೆ, ನೀರು ಹಾಗೂ ವಿದ್ಯುದ್ದೀಪಾಲಂಕಾರ ಮಾಡಲು ನಿರ್ಧರಿಸಿ ರಥೋತ್ಸವ ಮುಗಿದ ನಂತರದಲ್ಲಿ ಸಂಜೆ ಮೇಲೆ ಪೊಲೀಸ್ ನೇಮಕ ಅತ್ಯಗತ್ಯ. ಹಾಗೂ ರಾತ್ರಿ ವೇಳೆ ತೇರಿನ ಬಳಿ ಬೆಳಕಿನ ವ್ಯವಸ್ಥೆ ಮಾಡುವಂತೆ ಸ್ಥಳೀಯ ಭಕ್ತರು ಒತ್ತಾಯಿಸಿದರು. ದಾಸೋಹ ಸ್ಥಳ ಸೇರಿದಂತೆ ದೇವಾಲಯ ಆವರಣದಲ್ಲಿ ನೀರು ಹಾಕಿ ಧೂಳು ನಿಲ್ಲಿಸಲು ಹಾಗೂ ಬೀದಿ ದೀಪ ಅಳವಡಿಕೆ ಮಾಡಲು ಉಪ ವಿಭಾಗಾಧಿಕಾರಿ ನಟರಾಜ್ ಅವರು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು. ಹೀಗೆ ಅನೇಕ ಸಾಧಕ ಬಾಧಕಗಳ ಚರ್ಚೆಯನ್ನು ಹದಿನೆಂಟು ಕೋಮಿನ ಮುಖಂಡರ ನಡೆಸಿದರು.

ಸಭೆಯಲ್ಲಿ ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ತಹಶೀಲ್ದಾರ್ ಗಳಾದ ಬಿ.ಆರತಿ, ಜಿ.ವಿ.ಮೋಹನ್, ಕಂದಾಯ ನಿರೀಕ್ಷಕ ರಮೇಶ್, ಪಟೇಲ್ ಕೆಂಪೇಗೌಡ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಹಲವು ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!