ರಾಷ್ಟ್ರ ಧ್ವಜಕ್ಕೆ ಅಪಮಾನ ಪ್ರಕರಣ : ಕಾನೂನು ಕ್ರಮಕ್ಕೆ ಆಗ್ರಹಿಸಿದ ಕರುನಾಡ ವಿಜಯಸೇನೆ ತಾಲೂಕು ಘಟಕ.

ಗುಬ್ಬಿ: ಪಟ್ಟಣದ ಆಡಳಿತ ಸ್ಥಳೀಯ ಸಂಸ್ಥೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗಣ ರಾಜ್ಯೋತ್ಸವ ದಿನದಂದು ಸಂಜೆ ರಾಷ್ಟ್ರ ಧ್ವಜದ ಇಳಿಸುವಾಗ ರಾತ್ರಿ 8 ಗಂಟೆ ನಂತರ ತರಾತುರಿಯಲ್ಲಿ ಧ್ವಜವನ್ನು ಕೆಳಗಿಳಿಯಲಾಗಿದೆ. ಈ ತಪ್ಪನ್ನು ಮುಚ್ಚಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪ್ರಯತ್ನ ಮಾಡುತ್ತಿರುವ ಹಿನ್ನಲೆ ಕಾನೂನು ಕ್ರಮ ಜರುಗಿಸಿ ಎಂದು ತಹಶೀಲ್ದಾರ್ ಬಿ.ಆರತಿ ಅವರಿಗೆ ಕರುನಾಡ ವಿಜಯಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿ ಪಟ್ಟಣದಲ್ಲಿ ಧ್ವಜಕ್ಕೆ ಅಪಮಾನ ಮಾಡಿದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಸರ್ಕಾರಿ ಪ್ರೌಢಶಾಲೆಯಲ್ಲಿ ಧ್ವಜ ವಿರೂಪಗೊಳಿಸಿದ ಪ್ರಕರಣ ನಿಧಾನ ಗತಿಯಲ್ಲಿ ತನಿಖೆ ನಡೆದಿತ್ತು. ಅಂತಹ ಸಮಯದಲ್ಲಿ ಸಂಘಟನೆಗಳು, ದೇಶ ಪ್ರೇಮಿಗಳ ತಂಡ ಹೋರಾಟ ನಡೆಸಿ ತನಿಖೆಗೆ ಚುರುಕು ಮುಟ್ಟಿಸಿದ್ದರು. ಈ ಘಟನೆ ಸಹ ಅಧಿಕಾರಿಗಳ ರಕ್ಷಣೆಗೆ ತಂತ್ರ ನಡೆದಿದೆ. ಕೂಡಲೇ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರುನಾಡ ವಿಜಯಸೇನೆ ತಾಲ್ಲೂಕು ಅಧ್ಯಕ್ಷ ವಿನಯ್ ಒತ್ತಾಯಿಸಿದರು.

ರಾಷ್ಟ್ರ ಧ್ವಜಕ್ಕೆ ಕಾನೂನಿಗೆ ಒಳಪಟ್ಟ ನೀತಿ ಸಂಹಿತೆ ಇದೆ. ಧ್ವಜಾರೋಹಣ ಹಾಗೂ ಅವರೋಹಣ ಮಾಡಲು ವಿಶೇಷ ಕ್ರಮ ಅನುಸರಿಸಿ ಧ್ವಜಕ್ಕೆ ಗೌರವ ಸೂಚಿಸಬೇಕು. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಗಮನ ಹರಿಸಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ರಜೆಯ ದಿನದಂತೆ ತಮ್ಮ ಜವಾಬ್ದಾರಿ ಮರೆತಿದ್ದು ಅಪರಾಧವಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ ಸುಮೋಟೋ ಜಾರಿ ಮಾಡಿ ಕೇಸು ದಾಖಲಿಸಬೇಕು ಎಂದು ಸಂಘಟನೆಯ ಜಿ.ಎಸ್.ಮಂಜುನಾಥ್ ಆಗ್ರಹಿಸಿದರು.

ನಂತರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಬಿ.ಆರತಿ, ಈ ಪ್ರಕರಣ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ನೋಟಿಸ್ ಜಾರಿ ಮಾಡಿ ಹೇಳಿಕೆ ಪಡೆದಿದ್ದೇವೆ. ಅದನ್ನು ಜಿಲ್ಲಾಧಿಕಾರಿಗಳ ಬಳಿ ಕಳುಹಿಸಲಾಗುವುದು. ಮುಂದಿನ ಕ್ರಮ ಮೇಲಾಧಿಕಾರಿಗಳೇ ವಹಿಸುತ್ತಾರೆ ಎಂದು ತಿಳಿಸಿದರು.

ಈ ಸಮಯದಲ್ಲಿ ಕರುನಾಡ ವಿಜಯಸೇನೆ ಪದಾಧಿಕಾರಿಗಳಾದ ಕಿರಣ್, ಸದಾತ್ ಪಾಷ, ರಮೇಶ್, ಮಹೇಶ್, ಸತೀಶ್, ರಂಗನಾಥ್, ರವಿಕುಮಾರ್, ಮಾರಯ್ಯ, ಗುಬ್ಬಿ ಹಿತ ರಕ್ಷಣಾ ಸಮಿತಿಯ ಸಲೀಂ ಪಾಷ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!