ತುಮಕೂರು : ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ಈಗಾಗಲೇ ಐಎಎಸ್, ಐಪಿಎಸ್, ಡಿವೈಎಸ್ಪಿ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿಗಳನ್ನು ಹಂತ ಹಂತವಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ -2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯ ಅನ್ವಯ, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ರವಾನಿಸಿದೆ.
ಕಂದಾಯ ಇಲಾಖೆಯ 76 ತಹಶೀಲ್ದಾರ್‌ಗಳನ್ನು ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿದ ಸ್ಥಳದಲ್ಲಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ವರ್ಗಾಯಿಸಿ ಆದೇಶಿಸಿದೆ.
ತುಮಕೂರು ಜಿಲ್ಲೆಯಿಂದ ಶಿರಾ ತಹಶೀಲ್ದಾರ್ ಮಮತ ಎಂ,ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಸ್ವಿನಿ,ಮಧುಗಿರಿ ತಹಶೀಲ್ದಾರ್ ಸುರೇಶಾಚಾರ್ ಟಿ.ಜೆ ಈ ಮೂವರು ತಹಶೀಲ್ದಾರ್ ವರ್ಗಾವಣೆಗೊಂಡಿದ್ದಾರೆ.
ಮಮತ ಎಂ ಅವರು ಎರಡು ವರ್ಷದಿಂದ ಶಿರಾ ತಹಶೀಲ್ದಾರ್ ಆಗಿ ಉತ್ತಮ ಹಾಗೂ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಆದೇಶವನ್ನು ತಕ್ಷಣವೇ ಜಾರಿಗೊಳಿಸುವ ಮೂಲಕ ಉತ್ತಮ ಕ್ರಿಯಾಶೀಲ ಅಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ.ಕಾನೂನಿನ ಅಡಿಯಲ್ಲಿ ಕೆಲಸ ಮಾಡಿದ ಇವರಿಗೆ ಹಲವು ಸಮಸ್ಯೆಗಳು ಎದುರಾದವು ಅವೆಲ್ಲವನ್ನೂ ಮೆಟ್ಟಿನಿಂತು ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಿರೂಪಿಸಿದ್ದಾರೆ. ಎರಡು ಬಾರಿ ಕೋವಿಡ್ ಸಮಯದಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಿ ತಾಲ್ಲೂಕಿನ ಜನರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಾರೆ.ಇಂತಹ ಅಧಿಕಾರಿಗಳ ಸೇವೆ ನಮ್ಮ ಜಿಲ್ಲೆಗೆ ಮತ್ತೊಮ್ಮೆ ಸಿಗಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ತೇಜಸ್ವಿನಿ ಅವರು ಕಾನೂನು ಮಂತ್ರಿಗಳ ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಆಗಿ ಎರಡು ವರ್ಷಕ್ಕೂ ಹೆಚ್ಚಿನ ಸೇವೆಯನ್ನು ಸಲ್ಲಿಸಿದ್ದಾರೆ.ಇವರು ಸಹ ತಾಲ್ಲೂಕಿನ ಜನರಿಗೆ ಸರ್ಕಾರದ ಸವಲತ್ತುಗಳನ್ನು ಸೂಕ್ತ ಪಲಾನುಭವಿಗಳಿಗೆ ಸಿಗುವಂತೆ ಮಾಡಿ ಉತ್ತಮ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇವರಿಗೂ ಹಲವು ಸಮಸ್ಯೆಗಳು ಎದುರಾದವು ಅವುಗಳನ್ನು ಎದುರಿಸಿ ತಾಲ್ಲೂಕಿನ ಜನರಿಗೆ ನ್ಯಾಯ ಒದಗಿಸಿದ ತೃಪ್ತಿ ಇವರಲ್ಲಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ತೇಜಸ್ವಿನಿ ಅವರು ಕಳಂಕ ರಹಿತ ಅಧಿಕಾರಿಯಾಗಿದ್ದಾರೆ.
ಸುರೇಶಾಚಾರ್ ಅವರು ಏಕಶಿಲಾ ಬೆಟ್ಟದ ತವರು ಮಧುಗಿರಿ ತಹಶೀಲ್ದಾರ್ ಆಗಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಿಕ್ಕ ಕಡಿಮೆ ಅವಕಾಶದಲ್ಲಿ ತಾಲ್ಲೂಕಿನ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ.ಸರ್ಕಾರದ ಆದೇಶವನ್ನು ಪರಿಪಾಲನೆ ಮಾಡುವ ಮೂಲಕ ಅರ್ಹ ಪಲಾನುಭವಿಗಳಿಗೆ ಸವಲತ್ತುಗಳು ಸಿಗುವಂತೆ ನೋಡಿಕೊಂಡಿದ್ದಾರೆ.ತಾಲ್ಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ.
ಇಂತಹ ದಕ್ಷ ಹಾಗೂ ಜನಸ್ನೇಹಿ ಅಧಿಕಾರಿಗಳು ನಮ್ಮ ಜಿಲ್ಲೆಯ ತಾಲ್ಲೂಕುಗಳಲ್ಲಿ ಸೇವೆ ಸಲ್ಲಿಸಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ.ಇವರು ಮುಂಬಡ್ತಿ ಪಡೆದು ಮತ್ತೆ ನಮ್ಮ ತುಮಕೂರು ಜಿಲ್ಲೆಯಲ್ಲಿ ಸೇವೆ ನೀಡುವ ಅವಕಾಶ ಸಿಗುಂತಾಗಲಿ ಎಂದು ಪತ್ರಿಕೆ ಆಶಿಸುತ್ತದೆ.