ಕಾಂಗ್ರೆಸಿಗರನ್ನು ದ್ವೇಷ ಮಾಡಿದವರ ಪರ ಪಕ್ಷ ಒಲವು ತೋರದು : ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್.

ಗುಬ್ಬಿ: ಕಳೆದ 20 ವರ್ಷದಿಂದ ಹತ್ತಿರಕ್ಕೆ ಬಿಟ್ಟುಕೊಳ್ಳದೇ ಕಾಂಗ್ರೆಸಿಗರನ್ನು ದ್ವೇಷ ಮಾಡಿದವರ ಪರ ಪಕ್ಷ ಒಲವು ತೋರದು. ಹಾಗಾಗಿ ನಿಷ್ಠಾವಂತ ಕಾರ್ಯಕರ್ತ ಮುಖಂಡರಿಗೆ ಟಿಕೆಟ್ ಸಿಗಲಿದೆ. ಯಾರೋ ಹಿಂಜರಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ತಿಳಿಸಿದರು.

ಪಟ್ಟಣದ ಎಸ್ ಎಂ ಪ್ಯಾಲೇಸ್ ನಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕ ಆಯೋಜಿಸಿದ್ದ ಮತಗಟ್ಟೆಯ ಮುಖಂಡರ ಹಾಗೂ ಕಾರ್ಯಕರ್ತರ ಕಾರ್ಯಾಗಾರವನ್ನು ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದವರು ಎಂದರೆ ದೂರ ತಳ್ಳುತ್ತಾ ಯಾವುದೇ ಸಹಾಯ ಮಾಡಿಲ್ಲ. ಪರವಾಗಿ ಯಾರಿಗೂ ಮಾತನಾಡಿಲ್ಲ ಇಂತಹವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಹೇಗೆ ಟಿಕೆಟ್ ನೀಡುತ್ತಾರೆ. ಸದಾ ಕಾಂಗ್ರೆಸ್ ಮೇಲೆ ಟೀಕೆ ಮಾಡಿದವರನ್ನು ಬಿಟ್ಟು ಪಕ್ಷದವರಿಗೆ ಟಿಕೆಟ್ ಆಗಲಿದೆ. ಆಕಾಂಕ್ಷಿಗಳು ಹಿಂದೆ ಸರಿಯುವ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ವಿದ್ಯಾವಂತರು, ವಿವೇಕಯುಳ್ಳವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಎದೆಗುಂದುವ ಅಗತ್ಯವಿಲ್ಲ. ನಾಯಿಗಳು ಎಂದು ಟೀಕೆ ಮಾಡಿದ್ದು ಉಂಟು. ಆದರೆ ನಾಯಿಗಳಿಗೆ ನಿಯತ್ತಿದೆ. ಪಕ್ಷಕ್ಕೆ ನರಿಗಳು ಬರುತ್ತಿವೆ. ಅದರ ಬಗ್ಗೆ ಎಚ್ಚರಿಕೆ ಇರಬೇಕು ಎಂದು ಹೇಳಿದ ಅವರು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ ನಮ್ಮ ಮತದಾರರ ಬಳಿ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಿ ಓಲೈಸುವ ಕೆಲಸ ಮಾಡೋಣ ಎಂದರು.

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ ಬೂತ್ ಮಟ್ಟದಲ್ಲಿ ಬಿಜೆಪಿ ತೆರಳಿ ಅಲ್ಲಿ ಕಾಂಗ್ರೆಸ್ ಸಾಂಪ್ರದಾಯಕ ಮತಗಳ ಡಿಲೀಟ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ತೆರಳಿ ಸರಿಪಡಿಸಿಕೊಳ್ಳಬೇಕು. ಇದು ಗಂಭೀರ ವಿಚಾರ ಎಂದು ಹೇಳಿದ ಅವರು ವಿಶೇಷ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದಾರೆ. ಹೀಗೆ ನಡೆದಲ್ಲಿ ಪಕ್ಷ ಸಂಘಟನೆ ಸದೃಢಗೊಳ್ಳುತ್ತದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ ಸಂಘಟನೆಯ ವಿಚಾರದಲ್ಲಿ ವಿಶೇಷ ಆಯಾಮ ರೂಪಿಸಿದ ಹೆಗ್ಗಳಿಕೆ ಗುಬ್ಬಿ ಕಾಂಗ್ರೆಸ್ ಘಟಕಕ್ಕೆ ಸಿಗಲಿದೆ. ಬೂತ್ ಮಟ್ಟದ ಕಾರ್ಯಕರ್ತರ ಜೊತೆ ನೇರ ಸಂವಾದ ಮಾಡಿ ಅಲ್ಲಿನ ಆಗೋ ಹೋಗುಗಳ ಬಗ್ಗೆ ಚರ್ಚಿಸಿದಲ್ಲಿ ಮಾತ್ರ ತಳಮಟ್ಟದ ಅಂಶ ತಿಳಿಯುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಪಕ್ಷದ ಏಳಿಗೆಗೆ ಮೊದಲಿನಿಂದ ದುಡಿದವರ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಲ್ಲಿ ದುಡಿದು ಗೆಲುವು ಸಾಧಿಸೋಣ. ಶಾಸಕರಿಗೆ ಕರೆದು ಟಿಕೆಟ್ ನೀಡಿದಲ್ಲಿ ನಾನು ವೈಯಕ್ತಿಕವಾಗಿ ವಿರೋಧಿಸಿ ನಿಲ್ಲುತ್ತೇನೆ ಎಂದು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಎಲ್ಲಾ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಸಿ.ಹನುಮಂತಯ್ಯ, ಗುಬ್ಬಿ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಎಂ.ವಿ.ಶ್ರೀನಿವಾಸ್, ಬೆಟ್ಟದಹಳ್ಳಿ ಶಶಿಕಿರಣ್, ಕೆ.ಆರ್.ತಾತಯ್ಯ, ಮಾಜಿ ಜಿಪಂ ಸದಸ್ಯ ಪುಟ್ಟೇಗೌಡ, ಲಿಂಗರಾಜ್, ನರಸಿಂಹಯ್ಯ, ಸೌಭಾಗ್ಯಮ್ಮ, ಮಹಮ್ಮದ್ ಸಾಧಿಕ್, ಜಿ.ವಿ.ಮಂಜುನಾಥ್, ಜಿ.ಎಂ.ಶಿವಾನಂದ್, ಜಿ.ಎಸ್.ಮಂಜುನಾಥ್, ಜಿ.ಎಲ್.ರಂಗನಾಥ್, ಬೆಟ್ಟದಹಳ್ಳಿ ಸಿದ್ದೇಶ್, ಹೇಮಂತ್, ಪಣಿಂದ್ರ, ಅಮ್ಮನಘಟ್ಟ ಶಿವಣ್ಣ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!