ನಿಟ್ಟೂರು ಗ್ರಾಪಂ ಅಧ್ಯಕ್ಷರಾಗಿ ಚುನಾಯಿತರಾಗಿ ನರಸಯ್ಯ ಗೆಲವು.

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಟ್ಟೂರು 4 ನೇ ಬ್ಲಾಕ್ ನ ನರಸಯ್ಯ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು.

ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ಅವರು ನಡೆಸಿಕೊಟ್ಟರು. ಓಬಿಸಿ(ಎ) ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಅನ್ನಪೂರ್ಣಮ್ಮ ಅವರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ನರಸಯ್ಯ ಹಾಗೂ ಮಂಗಳಗೌರಮ್ಮ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 19 ಸದಸ್ಯರ ಮತದಾನ ಪ್ರಕ್ರಿಯೆ ನಡೆದು ನರಸಯ್ಯ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಮಂಗಳ ಗೌರಮ್ಮ 6 ಮತಗಳನ್ನು ಪಡೆದು ಪರಾಜಿತಗೊಂಡರು.

ನಂತರ ಸುದ್ದಿಗಾರರ ಜೊತೆ ನೂತನ ಅಧ್ಯಕ್ಷ ನರಸಯ್ಯ ಮಾತನಾಡಿ, ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಶಕ್ಷರಾಗಿ ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಅಭಿವೃದ್ದಿ ಕೆಲಸ ಮಾಡುತ್ತೇನೆ. ಎಲ್ಲರ ವಿಶ್ವಾಸ ಗಳಿಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದನಾಗಿರುತ್ತೇನೆ. ಹೆದ್ದಾರಿ ಬದಿಯ ನಿಟ್ಟೂರು ಗ್ರಾಮ ವ್ಯಾಪಾರಿ ಕೇಂದ್ರ ಆಗಿರುತ್ತದೆ. ಈ ನಿಟ್ಟಿನಲ್ಲಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಗುರುತಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವು ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಲತಾ, ಬಿಜೆಪಿ ಮುಖಂಡರಾದ ಪಿ.ಬಿ.ಚಂದ್ರಶೇಖರ ಬಾಬು, ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ. ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಹಾರನಹಳ್ಳಿ ಪ್ರಭಣ್ಣ, ಎನ್.ಸಿ.ಗಿರೀಶ್, ಜಗದೀಶ್, ನಾಗರಾಜು, ಪಿಡಿಓ ಉಮೇಶ್ ಇತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!