ಗುಬ್ಬಿ: ಸಿರಿ ಧಾನ್ಯಗಳ ಬಳಕೆ ಮಹತ್ವ ತಿಳಿಸುತ್ತಲೇ ರಾಗಿ ಮುದ್ದೆ ರೊಟ್ಟಿ ನೆನೆದು ಶ್ರೀ ಅನ್ನ ಹೆಸರಿನಲ್ಲಿ ಕೃಷಿ ಯೋಜನೆ ಬಗ್ಗೆ ಸುಳಿವು ನೀಡಿ ಅಭಿವೃದ್ದಿ ಮಂತ್ರ ಜಪಿಸಿ ಔದ್ಯೋಗಿಕ ಕ್ರಾಂತಿ ಹೇಳುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು.
ತಾಲ್ಲೂಕಿನ ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್ ಬಳಿಯ ಎಚ್ ಎ ಎಲ್ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕ ಲೋಕಾರ್ಪಣೆ ಹಾಗೂ ಜಲ ಜೀವನ್ ಮಿಷನ್ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡದಲ್ಲೇ ಮಾತು ಆರಂಭಿಸಿ ನೆರೆದಿದ್ದ ಜನಸ್ತೋಮ ಮನಸೆಳೆದು ಅಧ್ಯಾತ್ಮ ಜೊತೆ ಆಧುನಿಕತೆ ತುಮಕೂರು ಗಮನ ಸೆಳೆಯುವ ಬಗ್ಗೆ ಹಾಗೆಯೇ ಸಿದ್ದಗಂಗಾ ಮಠದ ತ್ರಿವಿಧ ದಾಸೋಹ ಹಾಗೂ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ಹಾಗೂ ಚಿದಂಬರಾಶ್ರಮ ಕ್ಷೇತ್ರಗಳ ಹೆಸರನ್ನು ಉಲ್ಲೇಖಿಸಿ ಗಮನ ಸೆಳೆದರು.

ಆತ್ಮ ನಿರ್ಭರ ಯೋಜನೆಯಡಿ ನಮಗೆ ಅಗತ್ಯ ಎಲ್ಲಾ ವಸ್ತುಗಳನ್ನು ನಾವೇ ತಯಾರು ಮಾಡುವ ಕೆಲಸ ನಡೆದಿದೆ. ಇದೇ ಮೇಕ್ ಇನ್ ಇಂಡಿಯಾ ಮಾತಿನಂತೆ ಯುದ್ದ ಸಾಮಗ್ರಿಗಳನ್ನು ಎಚ್ ಎ ಎಲ್ ಘಟಕ ಮೂಲಕ ತಯಾರಿ ನಡೆದಿದೆ. ನೂರಕ್ಕೆ ನೂರರಷ್ಟು ನಮ್ಮಲ್ಲೇ ಎಲ್ಲಾ ವಸ್ತುಗಳನ್ನು ತಯಾರಿ ನಡೆದಿದೆ ಎಂದ ಅವರು 2014 ಕ್ಕೆ ಮೊದಲು ಲೆಕ್ಕ ಆಲಿಸಿದರೆ 5 ಪಟ್ಟು ಬೆಳವಣಿಗೆ ಕಂಡ ಏರೋ ಸ್ಪೇಸ್ ಈ ಘಟಕದಲ್ಲಿ 4 ಲಕ್ಷ ಕೋಟಿ ರೂಗಳ ವಹಿವಾಟು ನಡೆಸಲಿದೆ. ಸ್ವಾವಲಂಬಿ ಜೊತೆ ನಾವೇ ರಫ್ತು ಮಾಡುವಲ್ಲಿ ಬಹುಪಾಲು ಮುಂದಿದ್ದೇವೆ ಎಂದರು.
ಕಳೆದ ಎಂಟು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಸಾಕಷ್ಟು ಸುಧಾರಣೆ ಮಾಡಿದ್ದೇವೆ. ಆದರೆ ಸುಳ್ಳನ್ನೇ ಹಲವು ಬಾರಿ ಹೇಳಿಕೊಂಡು ತಿರುಗುವ ಮಂದಿ ಮುಂದೆ ಕೊನೆಯಲ್ಲಿ ಸತ್ಯದ ಅರಿವು ಮೂಡಲಿದೆ. ಸಂಸತ್ತಿನಲ್ಲಿ ಗಂಟೆಗಟ್ಟಲೇ ಸಮಯ ವ್ಯರ್ಥ ಮಾಡುವವರ ಮುಂದೆ ಈ ಘಟಕ ಹಾಗೂ ಸ್ವಯಂ ಉದ್ಯೋಗ ಸೃಷ್ಠಿ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಗೆ ಮಾರ್ಮಿಕವಾಗಿ ತಿರುಗೇಟು ನೀಡಿದ ಅವರು ಜಲ ಜೀವನ್ ಮಿಷನ್ ಯೋಜನೆ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಬದ್ದತೆಯಲ್ಲಿ ನಡೆಯಲಿದೆ.ಜೊತೆಗೆ ಭೂಮಿಗೆ ನೀರಾವರಿ ಬಲ ನೀಡುವ ಯೋಜನೆಗೆ 5 ಸಾವಿರ ಕೋಟಿ ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮಧ್ಯ ಕರ್ನಾಟಕ ಇದರ ಲಾಭವಾಗಲಿದೆ. ಕೇಂದ್ರ ಸರ್ಕಾರ ಸಮರ್ಥ ಬಜೆಟ್ ಮಂಡನೆ ಮಾಡಿದೆ. ಸಶಕ್ತ ಭಾರತ ನಿರ್ಮಾಣ ಮಾಡುವ ಜೊತೆ ಶಕ್ತಿಮಾನ್ ಭಾರತ, ಗತಿಮಾನ್ ಭಾರತ ಅತೀ ದೊಡ್ಡ ಹೆಜ್ಜೆ ಇಡಲಿದೆ. ಪ್ರಜಾಹಿತ ಸರ್ವ ಸ್ಪರ್ಶಿ ಬಜೆಟ್ ನೀಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ ವರ್ಷಕ್ಕೆ 30 ಲಘು ಹೆಲಿಕಾಪ್ಟರ್ ತಯಾರಿಸುವ ಈ ಎಚ್ ಎ ಎಲ್ ಘಟಕ ಮುಂದಿನ ದಿನದಲ್ಲಿ 90 ಹೆಲಿಕಾಪ್ಟರ್ ತಯಾರಿಸಿ ನಂತರದಲ್ಲಿ ಬೃಹತ್ ಹೆಲಿಕಾಪ್ಟರ್ ಇಲ್ಲಿ ತಯಾರು ಮಾಡಲಿದೆ. ಕರ್ನಾಟಕ ಅಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಾಂತಿ ಸೌಹರ್ದ ನಾಡು, ಕರ್ನಾಟಕ ಅಂದರೆ ಭವಿಷ್ಯ ಭಾರತ ಎಂದ ಅವರು ಬದಲಾಗುವ ಭಾರತವನ್ನು ಇಡೀ ವಿಶ್ವವೇ ನೋಡುತ್ತಿದೆ. ರೇಷ್ಮೆ, ಹತ್ತಿ ಹಾಗೂ ಕಬ್ಬಿಣ ಮತ್ತು ಉಕ್ಕು ರಫ್ತು ಮಾಡುವ ದೇಶವಾಗಿ ಬೆಳೆದಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮಾತನಾಡಿ ಅಡಿಗಲ್ಲು ಹಾಕಿ ಘಟಕ ಲೋಕಾರ್ಪಣೆ ಮಾಡಿದ ಮೊದಲ ಪ್ರಧಾನಿ ಎನಿಸಿದ್ದಾರೆ. ಗತಿಗೆ ಶಕ್ತಿ ನೀಡಿ ಆತ್ಮ ನಿರ್ಭರ ಯೋಜನೆಯಡಿ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕದಲ್ಲಿ ಹೆವಿ ಹೆಲಿಕಾಪ್ಟರ್ ತಯಾರಿಸುವ ನಿಟ್ಟಿನಲ್ಲಿ ಗುಬ್ಬಿ ಘಟಕ ಬೆಳೆಯಲಿದೆ. ರಕ್ಷಣಾ ವಲಯದಲ್ಲಿ ಶೇಕಡಾ 90 ರಷ್ಟು ಆಮದು ಮಾಡಿಕೊಳ್ಳುತ್ತಿದ್ದ ಕಾಲ ಈ ಹಿಂದೆ ಇತ್ತು. ಈಗ ಶೇಕಡಾ 60 ರಷ್ಟು ತಯಾರು ಮಾಡಿ ರಫ್ತು ಮಾಡುತ್ತಿದ್ದೇವೆ. ಇದೇ ಮೋದಿ ಅವರ ದಿಟ್ಟ ನಿಲುವು ಹಾಗೂ ದೂರದೃಷ್ಟಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಲ್ಪತರು ನಾಡಿನ ಪರವಾಗಿ ಅಡಕೆ ಪೇಟೆ ಮತ್ತು ಹಾರ ಹಾಕಿ ಸನ್ಮಾನಿಸಲಾಯಿತು. ಸಿದ್ದಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಹಾಗೂ ಶ್ರೀ ಗುಬ್ಬಿ ಚನ್ನಬಸೇಶ್ವರ ಸ್ವಾಮಿ, ಶ್ರೀ ಗೋಡೆಕೆರೆ ಸಿದ್ಧರಾಮೇಶ್ವರರ ವಿಗ್ರಹ ಕೊಡುಗೆಯಾಗಿ ನೀಡಲಾಯಿತು.
ವೇದಿಕೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಸಂಸದರಾದ ಜಿ.ಎಸ್.ಬಸವರಾಜು, ಜಗ್ಗೇಶ್, ಶಾಸಕರಾದ ಮಸಾಲಾ ಜಯರಾಮ್, ಜ್ಯೋತಿ ಗಣೇಶ್, ಡಾ.ರಾಜೇಶ್ ಗೌಡ, ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ ಸೇರಿದಂತೆ ಎಚ್ ಎ ಎಲ್ ಅಧಿಕಾರಿಗಳು, ಸರ್ಕಾರದ ಉನ್ನತ ಅಧಿಕಾರಿಗಳು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.