ದೇಶದ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಒನ್ ಸ್ಟಾಪ್ ಪರಿಹಾರ ಕೇಂದ್ರವಾಗಿ ಗುಬ್ಬಿ ಹೆಚ್‌ಎಎಲ್ ಘಟಕ ಕಾರ್ಯಾರಂಭ: ಪ್ರಧಾನಿ ನರೇಂದ್ರ ಮೋದಿ

ತುಮಕೂರು: ರಕ್ಷಣಾ ವಲಯದಲ್ಲಿ ಆತ್ಮನಿರ್ಭರ್ ಭಾರತ್ಗೆ ಹೆಚ್ಚು ಆದ್ಯತೆಯನ್ನು ನೀಡುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ತುಮಕೂರು ಹೆಲಿಕಾಪ್ಟರ್ ಫ್ಯಾಕ್ಟರಿಯ ಮೇಕ್ ಇನ್ ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಬಾನಿನಲ್ಲಿ ಹಾರಾಡಲಿದ್ದು, ಈ ಮೂಲಕ ಭಾರತೀಯ ಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದರು.

ತುಮಕೂರು ಜಿಲ್ಲೆಯಲ್ಲಿರುವ ಹೆಚ್‌ಎಎಲ್ ಹೆಲಿಕಾಪ್ಟರ್ ಫ್ಯಾಕ್ಟರಿಯನ್ನು ದೇಶದ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಏಕಮೇವ(ಒನ್ ಸ್ಟಾಪ್) ಪರಿಹಾರ ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿದೆ ಎಂದರು.

ಅವರಿಂದು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನ ಹೆಚ್‌ಎಎಲ್ ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆ ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅನಾವರಣ ಜಲಜೀವನ್ ಮಿಷನ್ ಯೋಜನೆ, ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ತುಮಕೂರು ಕೈಗಾರಿಕಾ ಟೌನ್‌ಶಿಫ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ಹೆಚ್‌ಎಎಲ್ ಕಾರ್ಖಾನೆಯಿಂದಾಗಿ ಅಕ್ಕ-ಪಕ್ಕದ ಗ್ರಾಮದ ಜನರಿಗೆ ಉದ್ಯೋಗದ ಅವಕಾಶ ಹೆಚ್ಚಳವಾಗುತ್ತದೆ ಎಂದ ಅವರು, ಕಳೆದ ೮ ವರ್ಷಗಳಲ್ಲಿ ಸರ್ಕಾರಿ ಫ್ಯಾಕ್ಟರಿಗಳಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ ಎಂದರು.

ದೇಶದ ಅತಿ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ನನ್ನ ಸೌಭಾಗ್ಯದಿಂದ ಹೆಚ್‌ಎಎಲ್ ಫ್ಯಾಕ್ಟರಿಗೆ ಶಿಲಾನ್ಯಾಸ ಮಾಡುವ ಅವಕಾಶ ದೊರೆತಿತ್ತು. ಇದೀಗ ಹೆಚ್‌ಎಎಲ್ ಫ್ಯಾಕ್ಟರಿಯನ್ನು ಲೋಕಾರ್ಪಣೆಗೊಳಿಸುವ ಸರದಿಯೂ ದೊರಕಿರುವುದು ಸಂತಸ ತಂದಿದೆ. ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಹೆಚ್‌ಎಎಲ್ ಒಂದು ಉದಾಹರಣೆ. ರಕ್ಷಣಾ ಉಪಕರಣಗಳ ಉತ್ಪಾದನೆ ಭಾರತದಲ್ಲೇ ಆಗುತ್ತಿದೆ. ನಮ್ಮ ಸೇನೆಗೆ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳನ್ನು ನೀಡುತ್ತಿದ್ದೇವೆ. ಸೇನಾ ಉಪಕರಣಗಳ ಆಮದುಗಳು ಸಹ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೈಗಾರಿಕಾ ಟೌನ್‌ಶಿಫ್‌ಗಳ ಬೆಳವಣಿಗೆಯಿಂದ ಭಾರತ ದೊಡ್ಡ ಔದ್ಯೋಗಿಕ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಹರ್ ಘರ್ ಜಲ್ ಮತ್ತು ಹರ್ ಕೇತ್ ಕೋ ಪಾನಿ ಒದಗಿಸುವ ನಿಟ್ಟಿನಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಅಭೂತಪೂರ್ವ ರೀತಿಯಲ್ಲಿ ವಿಸ್ತರಣೆಯಾಗಿದೆ. ಇದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ನೀರಾವರಿ ಕ್ಷೇತ್ರಗಳಿಗೆ ಲಾಭವಾಗಿದೆ ಎಂದರು.

ಶಕ್ತಿಮಾನ್ ಭಾರತ್ ದಿಸೆಯಲ್ಲಿ ಬಜೆಟ್ ಮಂಡಿಸಲಾಗಿದ್ದು, ಹಳ್ಳಿಗಳು, ಬಡವರು, ಆದಿವಾಸಿಗಳು, ಮಹಿಳೆಯರು, ಯುವಜನರಿಗಾಗಿ ಈ ಬಜೆಟ್‌ನಲ್ಲಿ ಉತ್ತಮ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರ್ವರ ಏಳಿಗೆಯ ಬಜೆಟ್ ಇದಾಗಿದೆ. ಯುವಜನರಿಗೆ ಹೊಸ ಔದ್ಯೋಗಿಕ ಅವಕಾಶವನ್ನು ಕಲ್ಪಿಸುವ, ಭಾರತದ ಹಳ್ಳಿಗಳನ್ನು ಮತ್ತು ಕೃಷಿಯನ್ನು ಆಧುನೀಕರಣಗೊಳಿಸುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಬಜೆಟ್ ಇದಾಗಿದೆ ಎಂದರು.

ಪಿಎಂ ಕಿಸಾನ್ ಸಮ್ಮಾನ್ ಶಕ್ತಿ ಯೋಜನೆಯಡಿ ಸಣ್ಣ ರೈತರಿಗೆ ಅನುಕೂಲವಾಗಲಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಗ್ಯಾರಂಟಿ ರಹಿತ ಸಾಲ ಸೌಲಭ್ಯ, ಕಮ್ಮಾರ, ಅಕ್ಕಸಾಲಿಗ, ಬಡಗಿ, ಶಿಲ್ಪಿ ಮುಂತಾದ ಕುಶಲ ಕರ್ಮಿಗಳಿಗೆ ವಿಕಾಸ ಯೋಜನೆಯಡಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಸಹಾಯ ನೀಡಲಾಗುತ್ತಿದೆ ಎಂದರು.

ಕರ್ನಾಟಕದ ಸಿರಿಧಾನ್ಯಗಳಾದ ನವಣೆ, ಅರ್ಕ, ಸಜ್ಜೆ, ರಾಗಿ, ಊದಲು, ಬರಗು ಉತ್ತೇಜಿಸುವ ನಿಟ್ಟಿನಲ್ಲಿ ಈ ಆಹಾರ ಪದಾರ್ಥಗಳಿಗೆ ಶ್ರೀ ಅನ್ನ ಹೆಸರು ನೀಡುವ ಮೂಲಕ ಶ್ರೀ ಅನ್ನ ಉತ್ಪಾದನೆಗೆ ಬಲ ನೀಡಲಾಗಿದೆ. ಇದರಿಂದ ಬರಡು ಜಮೀನು ಹೊಂದಿರುವ ಪ್ರಯೋಜನವಾಗಲಿದೆ ಎಂದರು.

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹಗಳಾದ ಅನ್ನ, ಅಕ್ಷರ, ಆಶ್ರಯ ಕಾರ್ಯಕ್ರಮಗಳನ್ನು ಶ್ರೀ ಸಿದ್ಧಲಿಂಗ ಸ್ವಾಮಿಗಳು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಸಂತರ ಆಶೀರ್ವಾದದಿಂದ ಕರ್ನಾಟಕ ಸುಬಿಕ್ಷವಾಗಿದೆ ಎಂದರು.

ತಮ್ಮ ಭಾಷಣದ ಪ್ರಾರಂಭದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ನಿಟ್ಟೂರು ನಗರದ ಆತ್ಮೀಯ ನಾಗರಿಕ ಬಂಧುಗಳಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಪ್ರಧಾನಿಗಳು ಕರ್ನಾಟಕದ ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿಯನ್ನು ಈ ಸಂದರ್ಭ ನೆನೆದರು.

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಾತನಾಡಿ, ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಪ್ರಗತಿ, ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂದ ಅವರು, ಇಂತಹ ನಾಡಿನಲ್ಲಿ ವರ್ಷಕ್ಕೆ 6೦ ಲಘು ಉಪಯುಕ್ತ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಹೆಲಿಕಾಪ್ಟರ್ ಫ್ಯಾಕ್ಟರಿಯನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆಗೊಳಿಸಿರುವುದು ಸಂತಸ ತಂದಿದೆ ಎಂದರು.

ಈ ಗ್ರೀನ್ ಫ್ರೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿಯು ಭವಿಷ್ಯದ ಎಲ್ಲಾ ಹೆಲಿಕಾಪ್ಟರ್ ಯೋಜನೆಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ರೂಪಿಸಲಾಗಿದ್ದು, ಭವಿಷ್ಯದಲ್ಲಿ ಹೆಲಿಕಾಪ್ಟರ್ ಮತ್ತು ಅದರ ಇಂಜಿನ್‌ಗಳ ಉತ್ಪಾದನೆ, ನಿರ್ವಹಣೆ ಹಾಗೂ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಸೌಲಭ್ಯಗಳಿಗಾಗಿ ಸಾಮರ್ಥ್ಯವನ್ನು ನಿರ್ಮಿಸಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ನಡೆದಾಡುವ ದೇವರ ಜಿಲ್ಲೆಯಲ್ಲಿ ಹೆಚ್‌ಎಎಲ್ ಕಾರ್ಖಾನೆ ಸ್ಥಾಪನೆ ಔದ್ಯೋಗಿಕ ಕ್ರಾಂತಿ ಮತ್ತು ಆತ್ಮ ನಿರ್ಭರ ಕ್ರಾಂತಿಗೆ ಸಾಕ್ಷಿಯಾಗಿದೆ. ಹೆಚ್‌ಎಎಲ್ ತನ್ನದೇ ಇತಿಹಾಸ ಹೊಂದಿದ್ದು, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅತ್ಯಂತ ಅಗ್ರಗಣ್ಯ ಸಂಸ್ಥೆ ಎನಿಸಿದ್ದು, ಇಂತಹ ಹೆಚ್‌ಎಎಲ್ ಕಾರ್ಖಾನೆಗೆ ಪ್ರಧಾನ ಮಂತ್ರಿ ಮೋದಿ ಅವರು ಅಡಿಗಲ್ಲು ಹಾಕಿ ಅವರೇ ಉದ್ಘಾಟನೆ ನೆರವೇರಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಲಘು ಸಾಮರ್ಥ್ಯದ ಹೆಲಿಕಾಪ್ಟರ್ ಉತ್ಪಾದನೆಯ ನಂತರ ಹೆವಿ ಡ್ಯೂಟಿ ರಕ್ಷಣಾ ವಲಯದ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಗುಬ್ಬಿ ಘಟಕಕ್ಕೆ ಇದೆ. ಈ ಘಟಕದ ಸ್ಥಾಪನೆಯಿಂದ 1೦ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಶೇ.9೦ರಷ್ಟು ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು ಶೇ.೬೦ರಷ್ಟು ನಾವೇ ಹೆಲಿಕಾಪ್ಟರ್ ಬಿಡಿಭಾಗಗಳನ್ನು ತಯಾರಿಸಿ ರಫ್ತು ಮಾಡುತ್ತಿದ್ದೇವೆ. ಇದು ಆತ್ಮ ನಿರ್ಭರ್‌ಗೆ ಕೈಗನ್ನಡಿಯಾಗಿದೆ ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ಚಿಕ್ಕನಾಯಕನಹಳ್ಳಿ, ತಿಪಟೂರಿನ 3 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, 3 ವರ್ಷದಲ್ಲಿ 37ಲಕ್ಷ ಮನೆಗಳಿಗೆ ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಗಂಗೆಯನ್ನು ಹರಿಸಲಾಗಿದೆ ಎಂದ ಅವರು, ಚೆನ್ನೈ-ಬೆಂಗಳೂರು ಬಹು ಉದ್ದೇಶಿತ ಯೋಜನೆಯಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಲಿದೆ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಅಡಿಕೆಯಿಂದ ಮಾಡಿದಂತಹ ಹಾರ, ಪೇಟ ಹಾಗೂ ಶಿವಕುಮಾರ ಸ್ವಾಮಿಗಳ ಪುತ್ಥಳಿಯನ್ನು ಕಾಣಿಕೆಯನ್ನಾಗಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಸಚಿವರುಗಳಾದ ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಮುರಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ.ನಾಗೇಶ್, ಶಾಸಕರುಗಳಾದ ಜ್ಯೋತಿಗಣೇಶ್, ರಾಜೇಶ್‌ಗೌಡ, ಎಸ್.ಜಯರಾಂ, ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಸಂಸದರಾದ ಬಸವರಾಜು, ಜಗ್ಗೇಶ್ ಮುಂತಾದವರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!