ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ.

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ದಯಾನಂದ್ ಅಧ್ಯಕ್ಷರಾಗಿ ಹಾಗೂ ಆರ್.ಬಸವರಾಜು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಹಾಲಿನ ಕೇಂದ್ರದ ಕಚೇರಿಯಲ್ಲಿ ಸಹಕಾರ ಇಲಾಖೆಯ ಅಭಿವೃದ್ದಿ ಅಧಿಕಾರಿ ಮಹಾಂತೇಶ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಮುದ್ದುವೀರಪ್ಪ ಹಾಗೂ ಉಪಾಧ್ಯಕ್ಷ ಪುಟ್ಟಸಿದ್ದಯ್ಯ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 12 ಸದಸ್ಯರ ಒಮ್ಮತದಲ್ಲಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ದಯಾನಂದ್ ಮಾತನಾಡಿ ಪಟ್ಟಣಕ್ಕೆ ಸಮೀಪದ ಜಿ.ಹೊಸಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಹೈನುಗಾರಿಕೆಯಲ್ಲಿ ವಿಶ್ವಾಸ ಹೊಂದಿದೆ. ನಿತ್ಯ ಅಂದಾಜು 600 ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಶೀತಲ ಘಟಕ ಕೂಡಾ ಇಲ್ಲಿ ಸ್ಥಾಪನೆ ಆಗಿದ್ದು, ನಿತ್ಯ 3 ಸಾವಿರಕ್ಕೂ ಅಧಿಕ ಹಾಲು ಇಲ್ಲಿ ಸಂಗ್ರಹವಾಗುತ್ತಿದೆ. ಈ ಜೊತೆಗೆ ರೈತರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಬಟವಾಡೆ ಮಾಡಿ ಜೊತೆಗೆ ಬೋನಸ್ ಸಹ ನೀಡುವ ಪ್ರಕ್ರಿಯೆ ನಡೆಸಿದ್ದೇವೆ ಎಂದ ಅವರು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಡೈರಿಯನ್ನು ಮತ್ತಷ್ಟು ಉನ್ನತಿಗೆ ತರಲು ಎಲ್ಲಾ ಸದಸ್ಯರು ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ. ಅವರೆಲ್ಲರ ಸಲಹೆ ಸೂಚನೆಯಂತೆ ನಡೆದು ಸಂಘವನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ನೂತನ ಉಪಾಧ್ಯಕ್ಷ ಆರ್.ಬಸವರಾಜು ಮಾತನಾಡಿ ರೈತರ ಆರ್ಥಿಕ ಹೊರೆ ಇಳಿಸುವ ಕೆಲಸ ಮಾಡುವ ಹಾಲಿನ ಡೈರಿಯ ಎಲ್ಲಾ ಚಟುವಟಿಕೆಯು ಪಾರದರ್ಶಕವಾಗಿದೆ. ಅಚ್ಚುಕಟ್ಟಾಗಿ ವ್ಯವಹಾರ ನಡೆಸುವ ಹಲವು ವರ್ಷದ ಈ ಡೈರಿಯಲ್ಲಿ ಎಲ್ಲಾ ಸದಸ್ಯರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಅಭಿವೃದ್ದಿ ಕೆಲಸವೂ ಸಹಮತದಲ್ಲಿ ನಡೆದಿದೆ. ಹೊಸಹಳ್ಳಿ ಸುತ್ತಲಿನ ಗ್ರಾಮಕ್ಕೆ ಬದುಕು ಕಟ್ಟಿಕೊಟ್ಟ ಈ ಸಂಘವನ್ನು ಜವಾಬ್ದಾರಿಯಿಂದ ಮುನ್ನಡೆಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಮುಖಂಡರಾದ ಗಂಗಬಸಪ್ಪ, ಎಚ್.ಎಲ್.ಬಸವರಾಜು, ಎಲ್.ಚೇತನ್ ನಾಯಕ, ನರೇಶ್, ಡೈರಿಯ ಕಾರ್ಯದರ್ಶಿ ಜಗದೀಶ್, ಸಿಬ್ಬಂದಿಗಳಾದ ನಟರಾಜು, ಭೋಜರಾಜ್ ಇತರರು ಇದ್ದರು.

ವರದಿ:; ಹಾರೀಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!