ಮಡೇನಹಳ್ಳಿ ಗ್ರಾಮದಲ್ಲಿ ಮತ್ತೊಂದು ಚಿರತೆ ಸೆರೆ : ಆತಂಕದಲ್ಲೇ ಇರುವ ಗ್ರಾಮಸ್ಥರು.

ಗುಬ್ಬಿ: ಹಲವು ದಿನದಿಂದ ಉಪಟಳ ನೀಡುತ್ತಿದ್ದ ಗಂಡು ಚಿರತೆ ಬಂಧನದ ನಂತರ ನಿಟ್ಟುಸಿರು ಬಿಟ್ಟಿದ್ದ ಗ್ರಾಮಸ್ಥರಿಗೆ ಆತಂಕ ಮೂಡಿಸುವ ರೀತಿ ಮತ್ತೊಂದು ಹೆಣ್ಣು ಚಿರತೆ ಬೋನಿಗೆ ಸೆರೆಯಾದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಮಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಒಂದೇ ತಿಂಗಳಲ್ಲಿ ಎರಡು ಚಿರತೆ ಬೋನಿಗೆ ಸೆರೆಯಾಗಿದೆ. ಕಳೆದ ಐದಾರು ತಿಂಗಳಿಂದ ಕುರಿ ಮೇಕೆ ಸಾಕು ನಾಯಿಗಳ ಬೇಟೆಯಾಡುತ್ತಿದ್ದ ಚಿರತೆ ಗ್ರಾಮಸ್ಥರ ಕೃಷಿ ಚಟುವಟಿಕೆಗೆ ತೊಂದರೆ ತಂದಿತ್ತು. ಚಿರತೆ ಹಾವಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಿ ಕೆಲ ದಿನದ ಹಿಂದೆ ಬೋನು ಅಳವಡಿಸಿದ್ದರು. ಗಂಡು ಚಿರತೆಯೊಂದು ಆ ಸಮಯದಲ್ಲಿ ಸೆರೆಯಾಗಿತ್ತು. ಮತ್ತೊಂದು ಚಿರತೆ ಇರುವ ಶಂಕೆಯಲ್ಲೇ ಮುಂದುವರೆದ ಕಾರ್ಯಾಚರಣೆಗೆ ತುರಿಯಪ್ಪ ಎಂಬುವವರ ತೋಟದ ಮನೆ ಬಳಿ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿ ಮತ್ತೊಂದು ಹೆಣ್ಣು ಚಿರತೆ ಬಿದ್ದಿದೆ.

ಚಿರತೆಯ ಸಂಖ್ಯೆ ಈ ಭಾಗದಲ್ಲಿ ಹೆಚ್ಚಾಗಿರುವ ಲಕ್ಷಣ ಕಾಣುತ್ತಿದೆ. ಕಸಬ ಹೋಬಳಿಯಲ್ಲಿ ಚಿರತೆ ಸಂಚಾರ ಸಾಕಷ್ಟಿದೆ. ಜಾನುವಾರುಗಳ ರಕ್ಷಣೆಗೆ ಅರಣ್ಯ ಇಲಾಖೆಯು ಮತ್ತಷ್ಟು ಕಾರ್ಯಾಚರಣೆ ನಡೆಸಬೇಕಿದೆ. ಆಹಾರ ಹುಡುಕಿ ಗ್ರಾಮಗಳತ್ತ ಬರುವ ಚಿರತೆ ಯಾವುದೇ ಕ್ಷಣದಲ್ಲಿ ಮನುಷ್ಯರ ಮೇಲೆರೆಗುವ ಸಾಧ್ಯತೆ ಇದೆ. ಚಿರತೆಗಳನ್ನು ಬಂಧಿಸಿ ಸುರಕ್ಷಿತ ಅರಣ್ಯದತ್ತ ಸಾಗಿಸಿ ಕೃಷಿ ಚಟುವಟಿಕೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ..

You May Also Like

error: Content is protected !!