ಗುಬ್ಬಿ: ಪರಕಾಯ ಪ್ರವೇಶ ಮಾಡುವ ಶಕ್ತಿ ಇರುವ ದೈವ ಹಾಗೂ ಜನಪದ ಕಲೆಗಳು ವಿಶ್ವ ವ್ಯಾಪಿ ಮಾನ್ಯತೆ ಪಡೆದುಕೊಳ್ಳಲು ಕಲಾವಿದರು ಶಿಸ್ತು ಬದ್ಧತೆ ರೂಢಿಸಿಕೊಂಡು ತಾಲೀಮು ನಡೆಸಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯೆ ಹಾಗೂ ರಂಗಕರ್ಮಿ ಬಿ.ಜಯಶ್ರೀ ಗ್ರಾಮೀಣ ಜನಪದ ಕಲಾವಿದರಿಗೆ ಕರೆ ನೀಡಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಗುರು ಸಿದ್ದರಾಮ ಸೇನೆ ಆಯೋಜಿಸಿದ್ದ ನಂದಿ ಧ್ವಜ ಸಿರಿ-2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲಾವಿದ ಪಾತ್ರದ ಹೆಸರಿನಲ್ಲಿ ಗುರುತಿಸಿಕೊಳ್ಳಬೇಕು. ನಮ್ಮ ದೈವ ಕಲೆಗಳಲ್ಲಿ ನಾನಾ ಪ್ರಕಾರಗಳು ಇದ್ದು ವೇಷಭೂಷಣಗಳಿಗೆ ತಕ್ಕಂತೆ ನೃತ್ಯ ಆಯಾಮ ಇದೆ. ಅದನ್ನು ಒಂದು ಸಂಯೋಜನೆ ಮೂಲಕ ತಾಲೀಮು ಮಾಡಬೇಕು ಎಂದು ಸಂಪ್ರದಾಯಬದ್ಧ ಕಲೆಯ ಸಾಕಾರಕ್ಕೆ ಅಗತ್ಯ ಮಾಹಿತಿ ತಿಳಿಸಿದರು.

ಶಿವನ ಸ್ವರೂಪವಾದ ಲಿಂಗ ವೀರರು, ವೀರಗಾಸೆ ಹಾಗೂ ನಂದಿ ಧ್ವಜ ಕುಣಿತ ತನ್ನದೇ ವೈಶಿಷ್ಟ್ಯ ಹೊಂದಿದೆ. ಒಂದೊಂದು ವಿಭಿನ್ನ ಶೈಲಿಯ ನೃತ್ಯ ಅಡಕವಾಗಿದೆ. ಇವುಗಳ ಅಧ್ಯಯನ ಮಾಡಿ ಅದಕ್ಕೆ ಸೂಕ್ತ ತರಬೇತಿ ನೀಡಿ ದೇಶ ವ್ಯಾಪಿ ಮನ್ನಣೆ ಒದಗಿಸುವ ಕೆಲಸವನ್ನು ಸಿದ್ದರಾಮ ಸೇನೆಯ ಜೊತೆ ಜಿ.ವಿ. ಮಾಲತಮ್ಮ ಆರ್ಟ್ ಪೌಂಡೇಶನ್ ನಡೆಸಲಿದೆ ಎಂದ ಅವರು ಕೇವಲ ವೇಷಭೂಷಣ ಮೂಲಕ ಗುರುತಿಸಿಕೊಳ್ಳದೆ ದೈವ ನೃತ್ಯಗಳ ಹಿಂದಿನ ಇತಿಹಾಸ, ಅದರ ಮೂಲ ಉದ್ದೇಶ, ಪುರಾಣ ಕಥೆಗಳು ಬೆಳಕಿಗೆ ತರಬೇಕು. ಈ ಕಾರ್ಯ ಶಿಸ್ತು ಬದ್ಧತೆ ಮೂಲಕ ನಡೆಸಬೇಕು ಎಂದು ತಿಳಿಸಿ, ಶಿವನ ಸ್ವರೂಪದ ಈ ಮೂರು ಬಗೆಯ ನೃತ್ಯ ಪ್ರಕಾರಗಳಿಗೆ ಅರ್ಥ ಕಲ್ಪಿಸಬೇಕಿದೆ ಎಂದು ಕರೆ ನೀಡಿದರು.
ಸಂಶೋಧಕ ಪ್ರೊ.ನಂಜುಂಡಸ್ವಾಮಿ ಮಾತನಾಡಿ ಶಿವ ಪಾರಂಪರ್ಯದ ಸಂಕೇತ ನಂದಿ ಧ್ವಜ ಬಗ್ಗೆ ಇತಿಹಾಸವಿದೆ. ಬಸವಣ್ಣ, ಲಿಂಗಮುದ್ರೆ ಇರುವ ಧ್ವಜ ಶಿವನ ಸಾಕಾರ ಎನ್ನುವ ಪುರಾಣ ಕಥೆಗಳಿವೆ. ಮೈಸೂರಿನ ಅರಮನೆಯಲ್ಲಿ ಇಂದಿಗೂ ಇರುವ ಬಸವಣ್ಣನವರ ವೃಷಬೇಂದ್ರ ವಿಲಾಸ 800 ಚಿತ್ರಗಳನ್ನು ಹೊಂದಿದೆ. ಅದರ ಪುಸ್ತಕವಾಗಿ ಹೊರ ತರಲು ಐದು ಕೋಟಿ ರೂಗಳ ಅವಶ್ಯವಿದೆ. ಅದ್ಬುತ ನಂದಿ ಧ್ವಜ ಅರಮನೆಯಲ್ಲಿ ಇದ್ದು ನಾಲ್ವರು ಸೇರಿ ಕುಣಿತ ನಡೆಸುತ್ತಾರೆ. ಧ್ವಜಕ್ಕೆ ವಿಶೇಷ ಭಕ್ತಿ ಗೌರವ ಇಂದು ಪ್ರಸ್ತುತವಿದೆ. ಇಂತಹ ಇತಿಹಾಸ ಪ್ರಸಿದ್ದ ಕಲೆಗೆ ದೆಹಲಿಯ ಗಣ ರಾಜ್ಯೋತ್ಸವ ಪೆರೇಡ್ ನಲ್ಲಿ ಗೌರವ ತರುವ ಉದ್ದೇಶ ಈಡೇರಲಿ ಎಂದು ಆಶಿಸಿ ಗುಬ್ಬಿ ಸ್ಥಳದ ಇತಿಹಾಸ ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಪುರಾಣದಲ್ಲಿ ವೀರಭದ್ರ ಮೂಲಕ ಸ್ಥಾಪಿತ ನಂದಿ ಧ್ವಜ ಇಂದಿಗೂ ಧಾರ್ಮಿಕ ಸಂಪ್ರದಾಯ ಕಾರ್ಯಕ್ರಮದಲ್ಲಿ ಪ್ರಚಲಿತವಾಗಿದೆ. ಆದರೆ ಜಾತ್ರೆ ಇನ್ನಿತರ ಧಾರ್ಮಿಕ ಆಚರಣೆಗೆ ಸೀಮಿತವಾದ ಈ ದೈವೀ ಕಲೆಯು ದೇಶದ ಸಂಸ್ಕೃತಿ ಎನಿಸಿಕೊಳ್ಳಬೇಕು. ಜಾನಪದದ ಮೂಲ ಹೆಜ್ಜೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾದ ಸಂಸ್ಥೆಗಳ ಶ್ರಮಕ್ಕೆ ಕಲಾವಿದರು ಸಾಥ್ ನೀಡಬೇಕು. ಶಿಸ್ತು ಬದ್ಧತೆ ಯಶಸ್ವಿಯ ಮೆಟ್ಟಿಲು ಎಂದು ತಿಳಿಯಬೇಕು ಎಂದು ತಿಳಿಸಿದರು.
ನಂತರ ಸುಮಾರು ಐದು ನೂರಕ್ಕೂ ಅಧಿಕ ಕಲಾವಿದರು ನಂದಿ ಧ್ವಜ, ವೀರಗಾಸೆ, ಲಿಂಗವೀರರ ಕುಣಿತ ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾ ಶಂಕರ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಅಕ್ಷಯ ಚಾರಿಟಬಲ್ ಟ್ರಸ್ಟ್ ನ ಜಿ.ಎಸ್.ಪ್ರಸನ್ನಕುಮಾರ್, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ರಂಗತಜ್ಞ ಆನಂದ್ ರಾಜ್, ಕೋರಿ ಮಂಜಣ್ಣ, ಜಾವಗಲ್ ಮಂಜುನಾಥ್, ಶ್ರೀ ಗುರು ಸಿದ್ದರಾಮ ಸೇನೆಯ ಅಧ್ಯಕ್ಷ ಹೇಮಂತ್, ಸಂಚಾಲಕರಾದ ಬಸವರಾಜು, ಜಿ.ಎಂ.ಶಿವಾನಂದ್, ಬೆಟ್ಟದಹಳ್ಳಿ ಸಿದ್ದೇಶ್, ಗಂಗಾಧರ್ ಇತರರು ಇದ್ದರು.
ವರದಿ:. ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.