ಗುಬ್ಬಿ: ಕೋಮು ಸೌಹಾರ್ದ ಕಾಪಾಡಿಕೊಂಡು ಬಂದ ಗುಬ್ಬಿ ತಾಲ್ಲೂಕಿನಲ್ಲಿ ಎಂದೂ ಹಿಂದೂ ಮುಸ್ಲಿಂ ಗಲಭೆ ಸಂಭವಿಸಿಲ್ಲ. ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಇತಿಹಾಸ ಪ್ರಸಿದ್ಧವಾಗಿ ನಡೆದಿದೆ. ಹದಿನೆಂಟು ಕೋಮು ಒಗ್ಗೂಡಿ ನಡೆಯುವ ಈ ಜಾತ್ರೆಯಲ್ಲಿ ಅನ್ಯ ಧರ್ಮೀಯರು ಭಾಗವಹಿಸಿ ಶ್ರದ್ಧಾ ಭಕ್ತಿಯಿಂದ ತಮ್ಮ ಹೊಟ್ಟೆಪಾಡಿನ ವ್ಯಾಪಾರ ನಡೆಸುತ್ತಾರೆ. ಇಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮುಂದಾದ ಹಿಂದೂ ಪರ ಸಂಘಟನೆಯ ಮನವಿ ಪುರಸ್ಕರಿಸಿದೆ ಸೌಹಾರ್ದ ಕಾಪಾಡುವಂತೆ ಒತ್ತಾಯಿಸಿ ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ತಾಲ್ಲೂಕು ಕಚೇರಿಗೆ ಆಗಮಿಸಿದ ಸೇನೆಯ ಸದಸ್ಯರು ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಸೇನೆಯ ತಾಲ್ಲೂಕು ಅಧ್ಯಕ್ಷ ಜಿ.ವಿನಯ್ ಮಾತನಾಡಿ ಗುಬ್ಬಿಯಪ್ಪನ ಭಕ್ತರು ಎಲ್ಲಾ ಜಾತಿ ಧರ್ಮೀಯರಲ್ಲಿ ಇದ್ದಾರೆ. ಭಕ್ತಿ ಸಮರ್ಪಣೆ ಮಾಡುವ ವ್ಯಾಪಾರಿಗಳು ತಮ್ಮ ಕಾಯಕದಲ್ಲಿ ಕೈಲಾಸ ಕಾಣುತ್ತಾರೆ. ಶರಣಾದ ನಂಬಿಕೆಯಂತೆ ಕಾಯಕಕ್ಕೆ ಪ್ರಾಧಾನ್ಯತೆ ನೀಡುವ ಶರಣರ ಬೀಡಿನಲ್ಲಿ ವ್ಯಾಪಾರವನ್ನು ಮುಂದಿಟ್ಟು ಧರ್ಮ ದಂಗಲ್ ಮಾಡುವುದು ಸರಿಯಲ್ಲ. ಈಚೆಗೆ ಜಿಲ್ಲಾಧಿಕಾರಿಗಳಿಗೆ ಹಿಂದೂ ಪರ ಸಂಘಟನೆಗಳು ನೀಡಿರುವ ಮನವಿ ಪುರಸ್ಕರಿಸಬಾರದು ಎಂದು ಒತ್ತಾಯಿಸಿದರು.

ಸೇನೆಯ ಜಿ.ಎಸ್.ಮಂಜುನಾಥ್ ಮಾತನಾಡಿ ಮೊದಲಿನಿಂದ ಈ ಜಾತ್ರೆಯ ಅಂದ ಹೆಚ್ಚಿಸುವ ಕೆಲಸ ಸಣ್ಣ ವ್ಯಾಪಾರಿಗಳು ಮಾಡುತ್ತಾರೆ. ಭಕ್ತರನ್ನು ಆಕರ್ಷಿಸುವ ಕೆಲಸ ಮಾಡುವ ಈ ಕಾಯಕ ಯೋಗಿಗಳು ಎಂದೂ ತಮ್ಮ ಜಾತಿ ಧರ್ಮ ಬಿಂಬಿಸಿಲ್ಲ. ಸ್ಥಳೀಯರು ಎಂದೂ ವಿರೋಧ ಮಾಡದ ಈ ವಿಚಾರವನ್ನು ಹೊರ ಭಾಗದ ಕೆಲವರು ಮಾಡಲು ಹೊರಟಿರುವುದು ಸೂಕ್ತವಲ್ಲ. ಹಿಂದೂ ಪರ ಸಂಘಟನೆಗಳ ಕಿತಾಪತಿಗೆ ಅವಕಾಶ ಕೊಡದೆ ಮೊದಲಿನಂತೆ ಅದ್ದೂರಿ ಜಾತ್ರೆ ನಡೆಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಜೂಗಲ ಮಂಜುನಾಯಕ ಇದ್ದರು. ಕರುನಾಡ ವಿಜಯ ಸೇನೆಯ ಎಚ್.ಕೆ.ಮಧು, ಜಿ.ಎಂ.ಶಿವಾನಂದ್, ಜಿ.ಎಲ್.ರಂಗನಾಥ್, ರಮೇಶ್, ಚೇತನ್, ಹರಿಕೇಶವ, ಸದಾಶಿವನಾಯಕ, ದರ್ಶನ್, ವೆಂಕಟೇಶ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.