ಪಟ್ಟಣದ ಅಭಿವೃದ್ದಿಗೆ ಸಾರ್ವಜನಿಕರ ಸಲಹೆ ಅತ್ಯಗತ್ಯ : ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ.

ಗುಬ್ಬಿ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸ್ಥಳೀಯ ಆಡಳಿತ ಸಂಸ್ಥೆ ಪಟ್ಟಣ ಪಂಚಾಯಿತಿ ಸೂಕ್ತ ಆಯವ್ಯಯ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಪಟ್ಟಣದ ನಾಗರೀಕರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ ಎಂದು ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಸ ವಿಲೇವಾರಿ, ರಸ್ತೆ, ಚರಂಡಿ ಹಾಗೂ ನೀರಿನ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಈ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.

ಬಜೆಟ್ ರೂಪಿಸುವ ಮುನ್ನ ಅಗತ್ಯ ಆದಾಯ ಹೆಚ್ಚಿಸಿಕೊಳ್ಳುವ ಕೆಲಸ ಆಗಬೇಕು. ಈಗಾಗಲೇ ಬಾಕಿ ಇರುವ ತೆರಿಗೆ ವಸೂಲಿ ಕೆಲಸ ಕಟ್ಟುನಿಟ್ಟಾಗಿ ಮಾಡಬೇಕು. ಜೊತೆಗೆ ಅನಧಿಕೃತ ಕಟ್ಟಡಗಳು, ಪರವಾನಗಿ ಇಲ್ಲದೆ ಕಟ್ಟಿದ ಅಂಗಡಿ ಮಳಿಗೆಗಳು, ತೆರಿಗೆ ವಂಚಿಸಿರುವ ನಿವಾಸಿಗಳು ಇವರ ಬಗ್ಗೆ ಪರಿಶೀಲನೆ ನಡೆಸಬೇಕು. ನಂತರ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಅಂಗಡಿಗಳ ಬಾಕಿ ಬಾಡಿಗೆ ವಸೂಲಿ ಮಾಡಲು ಕಾನೂನು ಕ್ರಮ ಜರುಗಿಸಬೇಕು ಎಂದು ಜನರು ಸಲಹೆ ನೀಡಿದರು.

ಕಳೆದ ವರ್ಷ ಇದೇ ಸಭೆಯಲ್ಲಿ ನಮ್ಮಿಂದ ಸಲಹೆ ಪಡೆದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲಾರಾಗಿದ್ದೀರಿ ಎಂದು ಕಿಡಿಕಾರಿದ ಸಿ.ಆರ್.ಶಂಕರ್ ಕುಮಾರ್ ಸರ್ಕಾರಿ ಆಟದ ಮೈದಾನದಲ್ಲಿ ವಾಕಿಂಗ್ ಪಾತ್ ನಿರ್ಮಾಣಕ್ಕೆ ಮತ್ತೊಮ್ಮೆ ಆಗ್ರಹಿಸಿದರು. ಎರಡು ಮೂರು ಹಂತಸ್ತಿನ ಕಟ್ಟಡಗಳ ಪರಿಶೀಲಿಸಿ ಸರಿಯಾದ ತೆರಿಗೆ ನಿಗದಿ ಮಾಡಲು ಜಿ.ಎಸ್.ಮಂಜುನಾಥ್ ಸಲಹೆ ನೀಡಿದರು. ಎಂ.ಜಿ.ರಸ್ತೆ ಅಭಿವೃದ್ದಿ ಜೊತೆ ಸರಿಯಾದ ಚರಂಡಿ ನಿರ್ಮಾಣಕ್ಕೆ ಎಂ.ಎಸ್.ದೇವರಾಜ್ ಆಗ್ರಹಿಸಿದರು. ಸಾರ್ವಜನಿಕ ಸ್ಮಶಾನಕ್ಕೆ ಕೆಲ ಸಮುದಾಯದ ಮುಖಂಡರು ಆಗಮಿಸಿ ಸ್ಮಶಾನ ಸ್ಥಳಕ್ಕೆ ಒತ್ತಾಯಿಸಿದರು. ನಂತರ ಆಟೋ ಚಾಲಕರ ಸಂಘ ತಮಗೆ ಸೂಕ್ತ ನಿಲ್ದಾಣಕ್ಕೆ ಜಾಗ ನೀಡಲು ಮನವಿ ಮಾಡಿದರು. ಈಗ ಇರುವ ಬಸ್ ನಿಲ್ದಾಣದ ಸ್ಥಳಕ್ಕೆ ಮೇಲ್ಛಾವಣಿ ವ್ಯವಸ್ಥೆ ಹಾಗೂ ಉಚಿತವಾಗಿ ಪರವಾನಗಿ ಕೊಡುವ ಯೋಜನೆಗೆ ಚಾಲನೆ ನೀಡಲು ಕೋರಿ ಕೊಂಡರು.

ಎಂ.ಜಿ.ರಸ್ತೆ ಕೆಲಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ವಾರಕ್ಕೆರಡು ಬಾರಿ ಬರುವ ಇಂಜಿನಿಯರ್ ಸದ್ಯ ನಡೆದಿರುವ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತಿಲ್ಲ. ಸದಸ್ಯರು ಹೇಳುವ ಮಾತಿಗೆ ಬೆಲೆ ನೀಡದೆ ಅಸಡ್ಡೆ ತೋರುತ್ತಾರೆ. ವಾರದಲ್ಲಿ ಎರಡು ದಿನ ಕೇವಲ ಬಿಲ್ ನೋಡಲು ಬರುತ್ತಾರೆ. ಅಗತ್ಯ ಚರಂಡಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿಗಳು ಸಹ ಗಮನ ಹರಿಸಿಲ್ಲ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಅವಮಾನ ವಿಚಾರ ಪ್ರಸ್ತಾಪಿಸಿದ ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ಈ ಘಟನೆ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ನಂತರ ಬಜೆಟ್ ಪೂರ್ವಭಾವಿ ಸಭೆಯ ನಂತರ ಈ ಚರ್ಚೆ ಮಾಡುವುದಾಗಿ ಪರಿಸ್ಥಿತಿ ತಿಳಿಗೊಳಿಸಲಾಯಿತು.

ಈ ಎಲ್ಲಾ ಸಮಸ್ಯೆ ಹಾಗೂ ಸಲಹೆ ಪಡೆದ ಅಧ್ಯಕ್ಷ ಅಣ್ಣಪ್ಪಸ್ವಾಮಿ ಹಾಗೂ ಮುಖ್ಯಾಧಿಕಾರಿ ಮಂಜುಳಾದೇವಿ ನಮ್ಮ ಆದಾಯ ಮೂಲ ಅವಲೋಕಿಸಿ ಎಲ್ಲಾ ಕಾಮಗಾರಿಗೆ ಚಾಲನೆ ನೀಡಲು ಅವಕಾಶ ಕಲ್ಪಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.

ಸಭೆಯಲ್ಲಿ ಪಪಂ ನಾಮಿನಿ ಸದಸ್ಯ ಜಿ.ಆರ್.ಪ್ರಕಾಶ್, ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ, ಸಿಬ್ಬಂದಿಗಳಾದ ಅಂತರಾಜು, ಪ್ರೀತಂ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!