ಗುಬ್ಬಿ: ಸಮಾಜದಲ್ಲಿ ಧಾರ್ಮಿಕ ಆಚರಣೆಗೆ ಇರುವ ಪ್ರಾಮುಖ್ಯತೆ ಸಮಯಕ್ಕೆ ಸಹಾಯ ಮಾಡುವ ಗುಣ ಕೂಡಾ ಬಹು ಮುಖ್ಯ ಎನಿಸಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಶಿಕ್ಷಣಕ್ಕೆ ಒಲವು ತೋರಿ ಸಹಾಯ ಮಾಡುವ ಜಿಎಚ್ ವಿಎಸ್ ಟ್ರಸ್ಟ್ ಕಾರ್ಯ ಮೆಚ್ಚುವಂತಹದ್ದು ಎಂದು ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದೊಡ್ಡಗುಣಿ ಹಿರೇಮಠದಲ್ಲಿ ಆಯೋಜಿಸಿದ್ದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿಗಳ 63 ನೇ ವರ್ಧಂತಿ ಮಹೋತ್ಸವದಲ್ಲಿ ಜಿಎಚ್ ವಿಎಸ್ ಟ್ರಸ್ಟ್ ನೀಡಿದ ಉಚಿತ ನೋಟ್ ಬುಕ್ ಲೇಖನಿ ಸಾಮಗ್ರಿ ಶಾಲಾ ಮಕ್ಕಳಿಗೆ ವಿತರಿಸಿ ಮಾತನಾಡಿದ ಅವರು ಶಿಕ್ಷಣ ನೀಡುವುದು ಕೂಡಾ ಒಂದು ಧರ್ಮ ಕಾಯಕ. ಇಂದು ಅವರ ಸಹಾಯ ನಾಳೆಯ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಆಗಲಿದೆ ಎಂದರು.

ಸೇವಾ ಮನೋಭಾವ ಅನ್ನುವುದು ಎಲ್ಲರಲ್ಲೂ ಕಾಣುವುದಿಲ್ಲ. ಅದು ಉತ್ತಮ ಸಂಸ್ಕಾರ ಇರುವ ಮನೆಯ ಮಕ್ಕಳಲ್ಲಿ ಬರುತ್ತದೆ. ಹಾಗೆಯೇ ಗುರುಕುಲ, ಮಠಮಾನ್ಯಗಳು ಧಾರ್ಮಿಕ ಆಚರಣೆ ಮಾಡುವಲ್ಲಿ ಉತ್ತಮ ಸಂಸ್ಕಾರ ಇರುತ್ತದೆ. ಸೇವೆ ಪ್ರಚಾರಕ್ಕೆ ಮಾಡುವ ಗೀಳು ಬೆಳೆಸಿಕೊಳ್ಳದೇ ಬಡ ಮಕ್ಕಳ ಅಧ್ಯಯನಕ್ಕೆ ಅನುವು ಮಾಡುವ ಕೆಲಸ ಟ್ರಸ್ಟ್ ಮಾಡುತ್ತಿದೆ. ಕುಗ್ರಾಮಗಳನ್ನು ಹುಡುಕಿ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ದತ್ತು ಪಡೆಯುವ ಕೆಲಸ ಹಾಗೆಯೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕೆ ಅನುವು ಮಾಡುವ ಜೊತೆಗೆ ಬಡ ಮಕ್ಕಳ ಉಚಿತ ಶಿಕ್ಷಣಕ್ಕೆ ಶುಲ್ಕ ಪಾವತಿ ಮಾಡುವುದು ಕೂಡಾ ಶಿವ ಮೆಚ್ಚುವ ಕೆಲಸವಾಗಿದೆ. ಸದ್ದಿಲ್ಲದೆ ಸೇವಾ ಕಾರ್ಯ ಮಾಡುತ್ತಿರುವವರಿಗೆ ಕೈ ಜೋಡಿಸುವ ಕೆಲಸ ಆಸ್ತಿಕರು ಮಾಡಬೇಕು ಎಂದು ಕರೆ ನೀಡಿದರು.
ಜಿಎಚ್ ವಿಎಸ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಪ್ರಸಾದ್ ಮಾತನಾಡಿ ಅಭಿವೃದ್ದಿಗೆ ಶಿಕ್ಷಣವೇ ಮೂಲ ಮಂತ್ರ. ಇದನ್ನರಿತು ಎಲೆ ಮರೆಯ ಕಾಯಿಗಳಂತೆ ಮರೆಯಾಗುವ ನೂರಾರು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಉನ್ನತ ಶಿಕ್ಷಣಕ್ಕೆ ಅನುವು ಮಾಡುವ ಕಾಯಕ ನಡೆಸಲು ಆಲೋಚಿಸಿ ಕೆಲವೇ ಆಸಕ್ತರ ತಂಡ ಕಟ್ಟಿ ಟ್ರಸ್ಟ್ ಆರಂಭಿಸಿ ಈಗಾಗಲೇ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಒಂದೊಂದು ರೀತಿ ಅನುವು ಮಾಡಿದ್ದೇವೆ. ಬಡ ಮಕ್ಕಳಿಗೆ ಆರ್ಥಿಕ ನೆರವು ಜತೆ ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಕೆಲಸ ಸಹ ಮಾಡುವ ಯತ್ನದಲ್ಲಿದ್ದೇವೆ. ಸಾಮಾಜಿಕ ಕಳಕಳಿ ಹೊತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸೇವೆ ಆರಂಭಿಸಿ ಮುಂದಿನ ದಿನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಹ ಸಹಾಯ ಸಹಕಾರ ಕೆಲಸ ನಡೆಸುತ್ತೇವೆ ಎಂದು ತಮ್ಮ ಕಾರ್ಯ ಚಟುವಟಿಕೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಸುಮನ್ ಹೀರೆಮಠ ಮಾತನಾಡಿ ಧಾರ್ಮಿಕ ಕಾರ್ಯಕ್ಕೆ ಮನ್ನಣೆ ನೀಡುವ ಮಠಗಳು ಈ ಹಿಂದೆ ಗುರು ಕುಲವಾಗಿ ಶಾಲೆಯು ಆಗಿತ್ತು. ಹಾಸ್ಟೆಲ್ ಕೂಡಾ ನಡೆದಿತ್ತು. ಆಧುನಿಕತೆ ಬಂದಂತೆ ಬದಲಾದ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡ ನಾವುಗಳು ಧಾರ್ಮಿಕ ಜೊತೆಯ ಶಿಕ್ಷಣ ಮರೆಯಬಾರದು. ತ್ರಿವಿಧ ದಾಸೋಹ ನೀಡುವ ಮಠಮಾನ್ಯಗಳು ಇಂದು ನಡೆಸುತ್ತಿರುವ ಸೇವೆ ಸರ್ಕಾರದ ಕೆಲಸಕ್ಕೆ ಸಮ ಎಂದು ಹೇಳಿ ಮಕ್ಕಳಿಗೆ ಮಂತ್ರ ಪಠಣ ಮಾಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಂಶಿ ನಾಗರಾಜು, ಪ್ರಮೋದ್, ತೇಜಸ್, ವಿಶ್ವಾಸ್ ಸೇರಿದಂತೆ ಶಾಲಾ ಶಿಕ್ಷಕರು ನೂರಾರು ಮಕ್ಕಳು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.