ತುಮಕೂರು:: 1994 ರಿಂದ 2013ರವರೆಗೆ ತುಮಕೂರು ನಗರದಲ್ಲಿ ಶಾಂತಿಮಂತ್ರ ಮತ್ತು ಕಾಯಕ ಮಂತ್ರ ಪಠಿಸಿಕೊಂಡು ಬಂದಂತಹ ನನಗೆ ಪಕ್ಷದ ವರಿಷ್ಠರು ಈ ಭಾರಿ ನೂರಕ್ಕೆ ನೂರರಷ್ಟು ಟಿಕೇಟ್ ನೀಡುತ್ತಾರೆ ಎಂದು ಮಾಜಿ ಸಚಿವ ಎಸ್.ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಭಾರಿಗೆ 1974 ರಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ 2013ರವರೆಗೂ ಸತತವಾಗಿ 20 ವರ್ಷಗಳ ಕಾಲ ಶಾಸಕನಾಗಿ ಎರಡು ಭಾರಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ತುಮಕೂರು ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ಇದರ ಜೊತೆಗೆ 20 ವರ್ಷಗಳ ನಗರದ ಅಭಿವೃದ್ಧಿಯನ್ನೂ ಈಗ ಜನರ ಮುಂದಿಟ್ಟು ಸ್ಪರ್ಧಾ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಹೇಳಿದರು.
ಕಾರಣಾಂತರಗಳಿಂದ 2018ರಲ್ಲಿ ಪಕ್ಷದ ವರಿಷ್ಠರು ಟಿಕೇಟ್ ನೀಡದಿದ್ದರೂ ನಾನು ಬಿಜೆಪಿ ತೊರೆದಿಲ್ಲ, ನನ್ನ ಕಣ ಕಣದಲ್ಲೂ ಬಿಜೆಪಿ ರಕ್ತವೇ ಇರುವುದರಿಂದ ನಾನು ಪಕ್ಷಾಂತರ ಮಾಡಲಿಲ್ಲಿ, ಪ್ರಸ್ತು ನಡೆಯಲಿರುವ ವಿಧಾನಸಭಾ ಚುನಾವಣೆಗೆ ತುಮಕೂರು ನಗರದ ಎಲ್ಲಾ ನಾಗರೀಕರು, ಹಿತೈಷಿಗಳು, ಸ್ನೇಹಿತರು ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ಮತ್ತೆ ಸ್ಪರ್ಧಿಸಲು ತೀರ್ಮಾನಿಸಿದ್ದು, ಬಿಜೆಪಿಯಿಂದಲೇ ಟಿಕೇಟ್ ನೀಡುವ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾದ ನಂತರ ಬಿ ಫಾರಂ ಮತ್ತು ಪಕ್ಷದ ಚಿಹ್ನೆಗಾಗಿ ಕಾಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನ 20 ವರ್ಷಗಳ ಅವಧಿಯ ಆಡಳಿತದಲ್ಲಿ ನಡೆದಿರುವ ತುಮಕೂರು ನಗರದ ಅಭಿವೃದ್ಧಿಯ ಬಗ್ಗೆ ಕರಪತ್ರಗಳ ಮೂಲಕ ಪ್ರತಿ ಮನೆ ಮನೆಗೂ ನಮ್ಮ ಪಕ್ಷದ ಕಾರ್ಯಕರ್ತರು ಹಂಚುವ ಮೂಲಕ ತಿಳಿಸಲಿದ್ದಾರೆ. 10-12 ದಿನಗಳೊಳಗೆ ಕರಪತ್ರಗಳನ್ನು ಸಿದ್ಧಪಡಿಸಿಕೊಂಡು ಚುನಾವಣಾ ಬಹಿರಂಗ ಪ್ರಚಾರಕ್ಕೆ ಧುಮುಕುವುದಾಗಿ ತಿಳಿಸಿದರು.
ತುಮಕೂರು ನಗರದ ಎನ್.ಆರ್.ಕಾಲೋನಿಯ ಜನತೆ ಇಲ್ಲಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ೧೦ ತಮಟೆ ಮತ್ತು ಎರಡು ಜೋಳಿಗೆ ಸಿದ್ಧಪಡಿಸಿಕೊಂಡಿದ್ದೇನೆ. ಠೇವಣಿ ಹಣವನ್ನು ಸಂಗ್ರಹಿಸಿ ನಾವೇ ನೀಡುತ್ತೇವೆ ಎಂದು ಎನ್.ಆರ್.ಕಾಲೋನಿಯ ಜನತೆ ಹೇಳುತ್ತಿರುವ ಹಿನ್ನಲೆಯಲ್ಲಿ ಜೋಳಿಗೆ ಹಿಡಿದು ಅಲ್ಲಿಂದಲೇ ನಾನು ಚುನಾವಣಾ ಪ್ರಚಾರ ಆರಂಭಿಸುವುದಾಗಿ ತಿಳಿಸಿದರು.
ಕೊರೋನ ಸಂದರ್ಭದಲ್ಲಿ ನಗರದ ಜನತೆಗೆ ನಮ್ಮ ಕಾರ್ಯಕರ್ತರೊಡಗೂಡಿ ಮಾಡಿರುವ ಸೇವೆಯನ್ನು ನಗರದ ಜನತೆ ಎಂದೂ ಮರೆಯುವುದಿಲ್ಲ ಎಂದರು.
ಹಾಲಿ ಶಾಸಕರಿಗೆ ಟಿಕೇಟ್ ನೀಡದೆ ನಿಮಗೆ ಹೇಗೆ ಕೊಡುತ್ತಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೊಗಡು ಶಿವಣ್ಣ, ಹಾಲಿ ಲೋಕಸಭಾ ಸದಸ್ಯರಿಗೆ ಎಲ್ಲೆಲ್ಲಿ ಟಿಕೇಟ್ ಕೊಟ್ಟಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಲಿ ಶಾಸಕರಿಗೂ ಎಲ್ಲೆಲ್ಲಿ ಟಿಕೇಟ್ ನೀಡುವುದಿಲ್ಲ ಎಂಬುದು ಮುಂದೆ ನಿಮಗೆ ತಿಳಿಯುತ್ತದೆ. ಈ ಭಾರಿ ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಟಿಕೇಟ್ ನನಗೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರು ರಾಜಕೀಯ ಆಸೆ-ಅಕಾಂಕ್ಷೆಗಳನ್ನಿಟ್ಟುಕೊಂಡು ಪಕ್ಷಾಂತರಿಗಳಾಗುತ್ತಾರೆ, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ನನ್ನದು ಜನಸಂಘದ ರಕ್ತ, ಆದ್ದರಿಂದ ಯಾವ ಆಮಿಷಗಳಿಗೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ, ನಾನು ಕೊನೆಯವರಿಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಯಸಿಂಹ, ಶಾಂತಕುಮಾರ್, ಪಂಚಾಕ್ಷರಯ್ಯ, ನವೀನ್, ಶಬ್ಬೀರ್ ಅಹಮದ್, ಚೌಡಯ್ಯ, ರಫೀಕ್ ಅಹಮದ್ ಮುಂತಾದವರು ಹಾಜರಿದ್ದರು.