ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷದಿಂದ ನಿರುದ್ಯೋಗ ಸಮಸ್ಯೆ ತಾಂಡವವಾಡಿದೆ. ಕಿಂಚಿತ್ತೂ ಬದಲಾವಣೆ ಕಾಣದ ತಾಲ್ಲೂಕಿನಲ್ಲಿ ಉದ್ಯೋಗಾವಕಾಶ ಎಂಬುದು ಮರೀಚಿಕೆಯಾಗಿದೆ. ಕ್ಷೇತ್ರ ಪ್ರವಾಸದಲ್ಲಿ ಇವೆಲ್ಲಾ ಮನಗಂಡು ಕೂಡಲೇ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಸುಮಾರು 4 ಸಾವಿರ ಮಂದಿಗೆ ಉದ್ಯೋಗ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾಲ್ಕು ಬಾರಿ ಶಾಸಕರಾಗಿ ಒಮ್ಮೆ ಸಣ್ಣ ಕೈಗಾರಿಕಾ ಸಚಿವರಾದರೂ ಗುಬ್ಬಿ ತಾಲ್ಲೂಕಿನಲ್ಲಿ ಯುವಕರ ನಿರುದ್ಯೋಗ ನಿವಾರಣೆ ಮಾಡುವಲ್ಲಿ ವಿಫಲರಾದ ಶಾಸಕರ ಬಗ್ಗೆ ಯುವ ಜನಾಂಗದಲ್ಲಿ ಅಸಮಾಧಾನ ತಂದಿದೆ. ಯುವಕರ ಬವಣೆ ತಿಳಿದು ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇದೇ ತಿಂಗಳ 25 ರಂದು ಬೃಹತ್ ಉದ್ಯೋಗ ಮೇಳವನ್ನು ಸುಮಾರು 75 ಕಂಪೆನಿಯ ಮೂಲಕ ನಡೆಸಲಾಗುವುದು ಎಂದರು.

ಕಳೆದ ಹತ್ತು ದಿನದ ಪ್ರಚಾರದಿಂದ ಈಗಾಗಲೇ ಒಂದೂವರೆ ಸಾವಿರ ಅರ್ಜಿ ಬಂದಿದೆ. ಬೆಳಿಗ್ಗೆ 9 ಕ್ಕೆ ಆರಂಭವಾಗುವ ಮೇಳದಲ್ಲಿ ಎಲ್ಲಾ ರೀತಿಯ ವಿದ್ಯಾರ್ಹತೆಯ ಅರ್ಜಿದಾರರಿಗೆ ನೇರ ಸಂದರ್ಶನ ನಡೆಸಿ ಸ್ಥಳದಲ್ಲೇ ವೇತನ ನಿಗದಿ ಹಾಗೂ ನೇಮಕಾತಿ ಆದೇಶ ನೀಡಲಾಗುವುದು. ಕನಿಷ್ಠ ವಿದ್ಯಾರ್ಹತೆಯಿಂದ ಉನ್ನತ ವ್ಯಾಸಂಗ ಮಾಡಿದವರು ಹಾಗೂ ತಾಂತ್ರಿಕ ಶಿಕ್ಷಣ ಪಡೆದವರಿಗೂ ಉದ್ಯೋಗ ನೀಡಲಾಗುವುದು ಎಂದ ಅವರು ಜವಳಿ ಪಾರ್ಕ್ ಹೆಸರಿನಲ್ಲಿ ಉದ್ಯೋಗ ನೀಡುವ ಪೊಳ್ಳು ಭರವಸೆ ನೀಡಿ ಅಲ್ಲಿ ಏನು ನಡೆದಿತ್ತು ಎನ್ನುವ ಬಗ್ಗೆ ತಾಲ್ಲೂಕಿನ ಜನಕ್ಕೆ ತಿಳಿದಿದೆ. ಗ್ರಾಮೀಣ ಯುವಕರ ಕಷ್ಟ ನನಗೆ ಸಂಪೂರ್ಣ ತಿಳಿದಿದೆ. ನಾನು ಸಹ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಈ ನಿಟ್ಟಿನಲ್ಲಿ ತುಮಕೂರು ಸುತ್ತಲಿನಲ್ಲಿ ಉದ್ಯೋಗಾವಕಾಶ ಒದಗಿಸಲು ಕಂಪೆನಿಗಳಿಗೆ ಮನವಿ ಮಾಡಲಾಗಿದೆ. ಈ ಜೊತೆಗೆ ನನ್ನನ್ನು ಆಶೀರ್ವದಿಸಿ ಶಾಸಕನಾಗಿ ಆಯ್ಕೆ ಮಾಡಿದಲ್ಲಿ ನನ್ನ ಉದ್ಯಮ ಇಲ್ಲಿಯೇ ವಿಸ್ತರಿಸಿ ಸಾವಿರಾರು ಉದ್ಯೋಗ ಅವಕಾಶ ಮಾಡುತ್ತೇನೆ. ಜೊತೆಗೆ ಶಾಸಕರ ಜವಾಬ್ದಾರಿ ಕೆಲಸ ಹೇಗೆ ಎಂಬುದು ಒಂದು ಅವಕಾಶದಲ್ಲಿ ತಿಳಿಸುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕಳಪೆ ಗುಣಮಟ್ಟದ ಕುಕ್ಕರ್ ಹಂಚಿಕೆ ಈಗಾಗಲೇ ಜನರಲ್ಲಿ ಅಸಮಾಧಾನ ತಂದಿದೆ. ಕೇವಲ ಇನ್ನೂರು ರೂಪಾಯಿ ಬೆಲೆ ಬಾಳುವ ಕುಕ್ಕರ್ ಬ್ಲಾಸ್ಟ್ ಆಗಿರುವ ವರದಿ ನಮ್ಮಲ್ಲೇ ತಿಳಿದಿದೆ. ಹಾಗಲವಾಡಿ ಭಾಗದಲ್ಲಿ ಜನರು ಬೈಯುತಿದ್ದಾರೆ. ಕುಕ್ಕರ್ ತಿರಸ್ಕರಿಸಿದ್ದಾರೆ. ಕೆರೆಗೆ ನೀರು ಕೊಡಿ, ಮನೆ ಕೊಡಿ ಹೀಗೆ ಅಭಿವೃದ್ದಿ ಕೇಳುತ್ತಿದ್ದಾರೆ. 20 ವರ್ಷ ಮತ ಹಾಕಿದ್ದಕ್ಕೆ ಕೊಡುಗೆ ನೀಡುವ ಶಾಸಕರು ಈ ಕಳಪೆ ಕುಕ್ಕರ್ ನೀಡಬಾರದಿತ್ತು. ಹಸು ಕರುಗಳನ್ನು ನೀಡಿದ್ದರೂ ಸಾಕು ಸಲಹಿ ಬದುಕು ಕಟ್ಟಿಕೊಳ್ಳುತ್ತಿದ್ದರು ಎಂದು ಕುಟುಕಿದ ಅವರು ಮುಗ್ದ ಜನರ ಪ್ರಾಣಕ್ಕೆ ಸಂಚಕಾರ ತರುವ ಕುಕ್ಕರ್ ಧಿಕ್ಕರಿಸಿ ಕೆಲಸ ಮೊದಲು ಕೇಳಿ, ಭಾವನಾತ್ಮಕ ಸೆಳೆತಕ್ಕೆ ಅರಿಶಿಣ ಕುಂಕುಮ ಪ್ರಮಾಣ ಮಾಡುವ ಬಗ್ಗೆ ಸಹ ಎಚ್ಚರವಹಿಸಿ ಎಂದು ಎಚ್ಚರಿಕೆ ನೀಡಿ, ಜೆಡಿಎಸ್ ರಾಜೀನಾಮೆ ಪರ್ವ ಎಂಬ ತೋರಿಕೆಯ ಕಾರ್ಯಕ್ರಮ ಜನರಿಗೆ ಬೇಸರ ತಂದಿದೆ. ನಂತರ ನನ್ನ ಬಳಿ ಬಂದು ಮಾತನಾಡಿದ ನೂರಾರು ಮಂದಿ ಅಧಿಕಾರಕ್ಕೆ ಅವರ ಹಿಂದಿರುವುದಾಗಿ ಹೇಳಿದ್ದಾರೆ. ರಾಜೀನಾಮೆ ನೀಡಿ ನಂತರ ಅಖಾಡ ಹೇಗೆ ಇರುತ್ತದೆ ಕಾದು ನೋಡಿ ಎಂದು ಸವಾಲೆಸೆದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ, ಮುಖಂಡರಾದ ಸಲೀಂಪಾಷ, ನಾಗಸಂದ್ರ ವಿಜಯ್ ಕುಮಾರ್, ಆಟೋ ಮಂಜಣ್ಣ, ಶಿವಾಜಿ, ಡಿ.ರಘು ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.