2023ರ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ : ಜಿಲ್ಲೆಗೆ ದಿಗ್ಗಜರು ಆಗಮನ

ತುಮಕೂರು : ಬಿಜೆಪಿ ತುಮಕೂರು ಸಂಘಟನಾತ್ಮಕ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಂಡ ಜಯ ಪಡೆಯಲು ಕೇಂದ್ರ, ರಾಜ್ಯದ ಪ್ರಮುಖ ದಿಗ್ಜಜ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಗಮಿಸುತ್ತಿದ್ದು, ಬಿಜೆಪಿ ಭರ್ಜರಿ ತಯಾರಿ ನಡೆಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದರು. ಇವರು ಬಿಜೆಪಿ ಕಛೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿಯ ಕರ್ನಾಟಕ ವಿಧಾನಸಭೆ 2023ರ ಚುನಾವಣೆ ಹೈ-ವೋಲ್ಟೇಜ್ ಚುನಾವಣೆಯಾಗಿರುವುದರಿಂದ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ್ಲೂ ಭರ್ಜರಿ ಗೆಲುವಿಗೆ ಬಾರೀ ರಣತಂತ್ರವನ್ನು ಹೆಣೆದಿದೆ. ಬಿಜೆಪಿ ಅಭ್ಯರ್ಥಿಗಳ ಭಾರೀ ಅಂತರದ ಗೆಲುವಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪುವಂತೆ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಹುರಿದುಂಬಿಸಿ, ಮನೆ-ಮನ ಮುಟ್ಟುವ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಕಾರ್ಯೋಮುಖವಾಗಿದೆ ಎಂದರು. ಬಿಜೆಪಿಯು ಈಗಾಗಲೇ ಬೂತ್ ವಿಜಯ ಅಭಿಯಾನ ಹಾಗೂ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಗಳನ್ನು ಎಲ್ಲಾ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರ ಪರಿಶ್ರಮದಿಂದ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಎರಡೂ ಕಾರ್ಯಕ್ರಮಗಳು ರಾಜ್ಯದ ೫೮೧೮೬ ಬೂತ್‌ಗಳಲ್ಲಿನ ಕಾರ್ಯಕರ್ತರನ್ನು ಚುನಾವಣಾ ಕಾರ್ಯಕ್ಕೆ ಸಜ್ಜಾಗಿ ತೊಡಗಿಸಿಕೊಂಡು ಕಾರ್ಯಕರ್ತರ ಕ್ಷಮತೆ ಹಾಗೂ ಚಟುವಟಿಕೆಗಳ ವೇಗವನ್ನೂ ಹೆಚ್ಚಿಸಿದೆ. ಇದರಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಗೆಲುವಿಗೆ ಅನುಕೂಲವಾಗುವಂತೆ ಫಲಾನುಭವಿಗಳ ಸಮಾವೇಶ, ವಿಜಯ ಸಂಕಲ್ಪ ಯಾತ್ರೆ ರೋಡ್ ಶೋ, ಮೋರ್ಚಾಗಳ ಸಮಾವೇಶ , ಪ್ರಗತಿ ರಥ ವಾಹನ (ಎಲ್.ಇ.ಡಿ ವಿಡಿಯೋಗಳು) ಹಾಗೂ ಜನಧ್ವನಿಯಾಗಿ ಪ್ರಣಾಳಿಕೆ ಸಲಹಾ ಅಭಿಯಾನವನ್ನು ಎಲ್ಲ ವರ್ಗ, ಸಮುದಾಯದ ಪ್ರಮುಖರು, ನಾಗರೀಕರು, ಮತದಾರರು ಭಾಗವಹಿಸಲು ರಣತಂತ್ರ ರೂಪಿಸಿದೆ ಎಂದು ಮಾಹಿತಿ ನೀಡಿದರು.

ಸ್ಟಾರ್ ಕ್ಯಾಂಪೇನರ್‌ಗಳ ದಾಂಗುಡಿ

ಈ ಕಾರ್ಯಕ್ರಮಗಳ ಯಶಸ್ಸಿಗೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಜೀ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್, ಪ್ರಮುಖರಾದ ಆರ್.ಅಶೋಕ್, ಗೋವಿಂದ ಕಾಳಜೋಳ, ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜಯೇಂದ್ರ, ವಿ.ಸೊಮಣ್ಣ, ಅರಗ ಜ್ಞಾನೇಂದ್ರ, ಸಿ.ಅಶ್ವಥ್‌ನಾರಾಯಣ್, ಜೆ.ಸಿ.ಮಾಧುಸ್ವಾಮಿ, ಬಿ.ಎಸ್.ನಾಗೇಶ್ ಮತ್ತು ಜಿಲ್ಲೆಯ ಸಂಸದರು, ಶಾಸಕರು ಮುಂತಾದ ಪ್ರಭಾವಿ ನಾಯಕರು ಭಾಗವಹಿಸಲಿದ್ದಾರೆಂದರು.

ಕಾರ್ಯಕ್ರಮಗಳ ಬಗ್ಗೆ ಮಾಹಿತಿ

ತುಮಕೂರು ಸಂಘಟನಾತ್ಮಕ ಜಿಲ್ಲೆಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಕುಣಿಗಲ್, ಚಿಕ್ಕನಾಯಕನಹಳ್ಳಿ, ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಚ್ ತಿಂಗಳಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಆಯೋಜಿಸಿರುವ ಬಗ್ಗೆ ಮಾಹಿತಿ ನೀಡುತ್ತಾ, ತುಮಕೂರು ಸಂಘಟನಾತ್ಮಕ ಜಿಲ್ಲೆಯ ಕುಣಿಗಲ್‌ನಲ್ಲಿ ರೈತ ಮೋರ್ಚಾ ಸಮಾವೇಶ, ಗುಬ್ಬಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ, ಚಿಕ್ಕನಾಯಕನಹಳ್ಳಿಯಲ್ಲಿ ಎಸ್.ಟಿ. ಮೋರ್ಚಾ ಸಮಾವೇಶ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಸ್.ಸಿ. ಮೋರ್ಚಾ ಸಮಾವೇಶ, ತಿಪಟೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ತುಮಕೂರು ನಗರ ಹಾಗೂ ತುರುವೇಕೆರೆಯಲ್ಲಿ ಯುವ ಮೋರ್ಚಾ ಸಮಾವೇಶಗಳನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು. ಇದೇ ರೀತಿ ವಿಜಯ ಸಂಕಲ್ಪ ಯಾತ್ರೆಯು ಮಾರ್ಚ್ ೧೬ ರಂದು ತುಮಕೂರು ನಗರ, ಮಾರ್ಚ್ ೧೭ರಂದು ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ಮಾರ್ಚ್ ೧೮ರಂದು ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಬೃಹತ್ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ಹೆಚ್.ಎಸ್.ರವಿಶಂಕರ್ ಹೆಬ್ಬಾಕ ವಿವರಿಸಿ, ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಫಲಾನುಭವಿಗಳ ಸಮಾವೇಶ, ಎಲ್‌ಇಡಿ ವಿಡಿಯೋ ವಾಹನಗಳ ಮೂಲಕ ಪ್ರಗತಿ ರಥ ವಾಹನ ಸಂಚರಿಸಲಿದ್ದು, ಜಿಲ್ಲೆಯ ೭ ವಿಧಾನಸಭೆಯ ೧೬೮೧ ಬೂತ್‌ಗಳ ಮತದಾರರಿಂದ ಬಿಜೆಪಿ ಪ್ರಣಾಳಿಕೆಗೆ ಸಲಹೆಗಳನ್ನು ಪ್ರಣಾಳಿಕೆ ಸಲಹಾ ಅಭಿಯಾನದ ಮೂಲಕ ಪಡೆಯಲಾಗುವುದೆಂದರು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆ ಸಲಹಾ ಅಭಿಯಾನದ ಸಹ ಸಂಚಾಲಕರಾದ ಹಾಗೂ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಜೆ.ಜಗದೀಶ್, ಜಿಲ್ಲಾ ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಹಾಗೂ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಸಹಸಂಚಾಲಕ ಹಾಗೂ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಸದಸ್ಯ ರಾಜೇಶ್ ಕಂಬೇಗೌಡ, ಎಸ್.ಟಿ, ಮೋರ್ಚಾ ಜಿಲ್ಲಾಧ್ಯಕ್ಷ ಎ ವಿಜಯಕುಮಾರ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಯರಹಳ್ಳಿ ಶಂಕರಪ್ಪ, ಮೋರ್ಚಾಗಳ ಸಮಾವೇಶಗಳ ಸಂಚಾಲಕ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂದೀಪ್ ಗೌಡ, ಸಹ ಸಂಚಾಲಕ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ್ ಪಿ, ಫಲಾನುಭವಿಗಳ ಸಮ್ಮೇಳನದ ಸಂಚಾಲಕ ಹಾಗೂ ಜಿಲ್ಲಾ ಕಾರ್ಯದರ್ಶಿ ಮುದಿಗೆರೆ ಕೆಂಪೇಗೌಡ, ಸಹ ಸಂಚಾಲಕರುಗಳಾದ ಹಾಗೂ ಫಲಾನುಭವಿಗಳ ಪ್ರಕೋಷ್ಠದ ಸಹ ಸಂಚಾಲಕ ಜಿ.ಎಸ್.ಶ್ರೀಧರ್, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಷಣ್ಮುಖ, ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಜಿಲ್ಲಾ ಸಮಿತಿ ಸದಸ್ಯೆ ಕೋಮಲರವರುಗಳು ಉಪಸ್ಥಿರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!