ಕಾಡು ಗೊಲ್ಲ ಸಮುದಾಯ ನಿರ್ಲಕ್ಷ್ಯಿಸಿದರೆ ಚುನಾವಣೆಯಲ್ಲಿ ವಿರೋಧ ಎಚ್ಚರಿಕೆ

ಹೊಸಕೆರೆ : ಕಾಡು ಗೊಲ್ಲರ ಸಮಾಜವನ್ನು ಕೇವಲ ಮತ ಬ್ಯಾಂಕ್ ಗಳಂತೆ ಬಳಸಿಕೊಳ್ಳದೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಎಸ್ಟಿ ವರ್ಗಕ್ಕೆ ಸೇರಿಸಿ ಸರ್ಕಾರದ ಸವಲತ್ತು ಒದಗಿಸಬೇಕು. ಕೇವಲ ಆಶ್ವಾಸನೆ ನೀಡಿದ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಬರುವ ಚುನಾವಣೆಯಲ್ಲಿ ವಿರೋಧದ ಬಿಸಿ ಖಂಡಿತ ಎಂದು ಕಾಡು ಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಕಚೇರಿ ಬಳಿಯ ಕಾಡು ಗೊಲ್ಲರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾನೂನು ಸಚಿವರು ಕಾನೂನಿನ ಪ್ರಾಥಮಿಕ ಅರಿವು ಇಲ್ಲದೆ ಶಾಲಾ ದಾಖಲಾತಿಯಿಂದ ಮಾತ್ರ ಜಾತಿ ಪ್ರಮಾಣ ಪತ್ರ ನಿರ್ಧರಿಸುವ ಬಗ್ಗೆ ಹೇಳಿಕೆ ನೀಡಿರುವುದು ಸರಿಯಲ್ಲ. ಮೊದಲು ಸುಪ್ರೀಂ ಕೋರ್ಟ್ ಆದೇಶಗಳನ್ನು ಓದಿ ಜಾತಿ ಪ್ರಮಾಣ ಪತ್ರ ನೀಡುವ ಮಾನದಂಡ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದರು.
ಕಳೆದೆರಡು ಅಧಿವೇಶನದಲ್ಲಿ ಕಾಡು ಗೊಲ್ಲರ ಪರ ಸುಧೀರ್ಘ ಚರ್ಚೆ ಮಾಡಿ ಎಸ್ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಭರವಸೆ ನೀಡಿದ್ದು ಈಗ ಅದರ ಬಗ್ಗೆ ಮಾತನಾಡುತ್ತಿಲ್ಲ. ಈ ಜೊತೆಗೆ ಜಾತಿ ಪ್ರಮಾಣ ಪತ್ರ ಪಡೆಯಲು ಶಾಲಾ ದಾಖಲಾತಿ ಮಾತ್ರ ಎನ್ನುವ ಅಸಂಬದ್ಧ ಹೇಳಿಕೆ ನೀಡಿದ್ದು ಸರಿಯಲ್ಲ. ಉಳಿದ 25 ದಿನದಲ್ಲಿ ನಮ್ಮ ಜನಾಂಗಕ್ಕೆ ನ್ಯಾಯ ಒದಗಿಸದೇ ಇದ್ದಲ್ಲಿ ಶಾಸಕರ ಹಾಗೂ ಸಂಸದರ ಎರಡೂ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ 8 ಲಕ್ಷ ಕಾಡು ಗೊಲ್ಲರ ಮತ 40 ಕ್ಷೇತ್ರದಲ್ಲಿ ನಿರ್ಣಾಯಕ. ಈ ಬಗ್ಗೆ ಎಚ್ಚರ ಇರಲಿ. ಮುಂದಿನ ತಿಂಗಳ 13 ರಂದು ಬೃಹತ್ ಹೋರಾಟವನ್ನು ಗುಬ್ಬಿಯಲ್ಲಿ ಆಯೋಜಿಸಿ ಎಸ್ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಹಾಗೂ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ನೀಡುವಂತೆ ಆದೇಶ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಕಾಡು ಗೊಲ್ಲರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜು ಮಾತನಾಡಿ ಪ್ರಬುದ್ಧ ಕಾನೂನು ಸಚಿವರು ಈ ರೀತಿ ಅಪ್ರಬುದ್ಧ ಹೇಳಿಕೆ ನೀಡಬಾರದಿತ್ತು. ಜಾತಿ ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಆದೇಶವನ್ನು ಮೊದಲು ಓದಿ ಮಾತನಾಡಬೇಕಿತ್ತು. ನೋಂದಣಿ ಮಹಾ ನಿರ್ದೇಶನಾಲಯ ಆಕ್ಷೇಪಣಾ ಪತ್ರ ನೀಡಿದರೂ ಸರ್ಕಾರ ಮೀನಾ ಮೇಷ ಎಣಿಸಿದೆ. ಅಧೀಮ ಬುಡಕಟ್ಟು ಕಾಡು ಗೊಲ್ಲರ ಬಗ್ಗೆ ತಿಳಿಯಬೇಕು. ಬುಡಕಟ್ಟು ಎಲ್ಲಾ ಲಕ್ಷಣ ಇದ್ದರೂ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸಲ್ಲದ ಅಡ್ಡಿ. ಎಸ್ಟಿ ವರ್ಗಕ್ಕೆ ಸೇರಿಸುವಲ್ಲಿ ಸಹ ಸರ್ಕಾರ ಕೇವಲ ಶಿಫಾರಸ್ಸು ಕಳುಹಿಸುವ ನಾಟಕವಾಡಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕಿನಲ್ಲಿ ಪ್ರತಿಭಟನೆ ನಡೆದಿದೆ. ಮುಂದಿನ ತಿಂಗಳ 13 ರಂದು ಗುಬ್ಬಿಯಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಡು ಗೊಲ್ಲರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ತೆಂಗು ಮತ್ತು ನಾರು ಅಭಿವೃದ್ದಿ ಮಂಡಳಿ ಸದಸ್ಯ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯೆ ಯಶೋಧಮ್ಮ, ತಾಪಂ ಮಾಜಿ ಸದಸ್ಯ ತಿಮ್ಮಯ್ಯ, ಮುಖಂಡರಾದ ಜಂಜೆಗೌಡ, ಕೆಟಿಕೆ ಪ್ರಭು, ಮಲ್ಲಿಕಾರ್ಜುನಸ್ವಾಮಿ, ಮಂಜಣ್ಣ, ಹಾಲೇಗೌಡ, ತಮ್ಮಯ್ಯ, ಜಯಣ್ಣ, ಶ್ರೀನಿವಾಸ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!