ತುಮಕೂರು : ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಥಮ ಪಿಯುಸಿ ಪರೀಕ್ಷೆಗಳ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ದಕ್ಷ ಅಧಿಕಾರಿ ಗಂಗಾಧರ್ ಅವರ ಸಮಯೋಚಿತ ಪ್ರಜ್ಞೆಯಿಂದ ಬೇರೆ ಪ್ರಶ್ನೆ ಪತ್ರಿಕೆಗಳನ್ನು ಬದಲಿಸಿ ಸುಸೂತ್ರವಾಗಿ ಪರೀಕ್ಷೆ ನಡೆಯುವಂತೆ ಮಾಡಿದ್ದಾರೆ.
ಇದೇ ತಿಂಗಳು 21 ಮಂಗಳವಾರ ನಡೆಯಬೇಕಿದ್ದ ಇಂಗ್ಲಿಷ್ ಪತ್ರಿಕೆಯು ಸೋರಿಕೆಯಾಗಿತ್ತು ಎಂಬ ಮಾಹಿತಿ ಪಡೆದು, ತಕ್ಷಣವೇ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಂಗಾಧರ್ ಅವರು ಪರೀಕ್ಷೆಯನ್ನು ರದ್ದುಗೊಳಿಸಿ ಮುಂದಿನ ತಿಂಗಳು ಮಾರ್ಚ್ 6 ರಂದು ನಡೆಯಲು ಆದೇಶ ಮಾಡಿದರು. ಈ ಆದೇಶದಂತೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಬದಲಾದ ದಿನಾಂಕವನ್ನು ಪ್ರಕಟಿಸಿ ಪರೀಕ್ಷೆ ರದ್ದು ಮಾಡಲಾಯಿತು. ಅಲ್ಲದೆ ಸಂಬಂಧ ಪಟ್ಟವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ತುಮಕೂರು ಎನ್ ಇ ಪಿ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ಕೈಗೊಳ್ಳಲಾಗಿದೆ.
ಮುಂದಿನ ಪತ್ರಿಕೆಗಳನ್ನು ಯಾವುದೇ ತೊಂದರೆ ಇಲ್ಲದೆ ಪರೀಕ್ಷಾ ಕಾರ್ಯಗಳು ಸುಸೂತ್ರವಾಗಿ ನಡೆಯುತಿದ್ದು, ಯಾವುದೇ ಸುಳ್ಳು ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಂಗಾಧರ್ ಮನವಿ ಮಾಡಿದ್ದಾರೆ.
ಅಧಿಕಾರಿಗಳ ಕಾರ್ಯಕ್ಕೆ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘ, ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಂಘ, ಹಾಗೂ ಜಿಲ್ಲಾ ಉಪನ್ಯಾಸಕರ ಸಂಘಗಳು ಮೆಚ್ಚುಗೆ ವ್ಯಕ್ತಪಡಿಸಿವೆ.