ಕೊರಟಗೆರೆ: ಸರ್ಕಾರಿ ನೌಕರರಿಗೆ ಓಪಿಎಸ್ ಸೇರಿದಂತೆ ವಿವಿಧ ಬೇಡಿಕೆಗಳು ತಕ್ಷಣ ಜಾರಿಗೆ ಬರುವಂತೆ ಮಾಡಬೇಕು. ಇಲ್ಲದಿದ್ದರೆ ಮಾರ್ಚ್ 1ರಿಂದ ತಾಲೂಕಿನಾದ್ಯಂತ ಯಾವುದೇ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಸರ್ಕಾರಕ್ಕೆ ಸಂದೇಶ ನೀಡಿದ್ದಾರೆ.
ತಾಲೂಕಿನ ಸರ್ಕಾರಿ ನೌಕರರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 2023-24ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನ ಬತ್ತಿ ಪರಿಷ್ಕರಣಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡಿರುವುದಿಲ್ಲ. ಇದನ್ನು ಮನಗೊಂಡ ಸರ್ಕಾರಿ ನೌಕರರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಮಾನ್ಯ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ ನಿರ್ಧರ ತೆಗೆದುಕೊಳ್ಳಲಿಲ್ಲ ಎಂದರೆ ಮಾರ್ಚ್ 1ನೇ ತಾರೀಖಿನಿಂದ ಯಾವುದೇ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವುದಿಲ್ಲ. ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು.
ಹಾಗೆಯೇ 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ವಿಧಾನಸಭಾ ಚುನಾವಣೆ ನೀತಿ ಸಹಿತ ಜಾರಿಗೂ ಮೊದಲು ಸರ್ಕಾರಿ ನೌಕರರ ಬೇಡಿಕೆಗಳನ್ನ, ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜೆ ಹನುಮಂತರಾಯಪ್ಪ ಮಾತನಾಡಿ, ಪಂಜಾಬ್, ರಾಜಸ್ಥಾನ್, ಹಿಮಾಚಲ ಪ್ರದೇಶಗಳ ಮಾದರಿಯಂತೆ ಕರ್ನಾಟಕ ಸರ್ಕಾರವು ಎನ್.ಪಿ.ಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸಿ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು. ಈ ಮೂಲಕ ನೌಕರರ ವೃದ್ಧಾಪ್ಯ ಸಮಯಕ್ಕೆ ಆಸರೆಯಾಗಬೇಕು. ಇಲ್ಲವಾದಲ್ಲಿ ಮಾರ್ಚ್ ೧ರಿಂದ ನಮ್ಮ ಸರ್ಕಾರಿ ಅಧಿಕಾರಿಗಳಾಗಲಿ, ಸಿಬ್ಬಂದಿ ವರ್ಗದವರಾಗಲಿ ಯಾರು ಕೂಡ ಕಚೇರಿಗಳಿಗೆ ಹಾಜರಾಗುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮಾಧ್ಯಮಗಳ ಮುಖಾಂತರ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಚೆನ್ನರಾಜು, ರಂಗರಸಯ್ಯ, ವಿ.ಎ ಬಸವರಾಜು, ಶಿವಲಿಂಗಯ್ಯ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ನೌಕರರ ಸಂಘದ ಅಧಿಕಾರಿಗಳು, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು, ಶಿಕ್ಷಕರು, ನೌಕರರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ :-ಹರೀಶ್ ಬಾಬು ಬಿ.ಹೆಚ್