ಗುಬ್ಬಿ: ಜೆಡಿಎಸ್ ಯುವ ಘಟಕ ಅಧ್ಯಕ್ಷನಾಗಿ ಪಕ್ಷ ವಿರೋಧಿ ಕೆಲಸ ಮಾಡಿ ಉಚ್ಛಾಟಿತಗೊಂಡ ಕೆ.ಆರ್.ವೆಂಕಟೇಶ್ ಚೂರಿ ಹಾಕುವ ಕೆಲಸ ಮೊದಲಿನಿಂದ ಮಾಡಿಕೊಂಡು ಈಗ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಜೆಡಿಎಸ್ ನಲ್ಲೇ ಬೆಳೆದು ಉಂಡ ಮನೆಗೆ ಎರಡು ಬಗೆದ ನೀನು ತಾಪಂ ಜಿಪಂ ಚುನಾವಣೆಯಲ್ಲಿ ಶಾಸಕರ ಪತ್ನಿ ವಿರುದ್ದ ಮತ ಕೇಳಿ ಚೂರಿ ಹಾಕುವ ಕೆಲಸ ನೀನು ಮಾಡಿದ್ದೆ ಎಂದು ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಗಂಗಸಂದ್ರ ಮಂಜುನಾಥ್ ಹಿಗ್ಗಮುಗ್ಗಾ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಆದೇಶ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಡಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ದ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ. ಸದಾ ಅಸೂಯೆ ತುಂಬಿಕೊಂಡ ವೆಂಕಟೇಶ್ ನೀನು ದಲಿತ ಪತ್ರಕರ್ತರ ಬಗ್ಗೆ ಕೇವಲವಾಗಿ ಮಾತನಾಡಿ ಇಡೀ ಜಿಲ್ಲೆಗೆ ಪರಿಚಿತನಾಗಿರುವೆ. ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವ ನೀನು ನಾಗರಾಜು ಅವರು ಶಾಸಕ ಮಸಾಲಾ ಜಯರಾಮ್ ಅವರಿಗೆ ಚೂರಿ ಹಾಕಿದ್ದಾರೆ ಎಂದಿರುವೆ. ತಾಕತ್ತು ಇದ್ದರೆ ಈ ಕೂಡಲೇ ಈ ಹೇಳಿಕೆಯನ್ನು ಶಾಸಕ ಜಯರಾಮಣ್ಣ ಅವರ ಮೂಲಕ ಹೇಳಿಸಪ್ಪಾ ಎಂದು ನೇರ ಸವಾಲೆಸೆದರು.

ಹೊಸಕೆರೆ ಬಳಿ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ತೆಗೆದ ಪೋಟೋ ಹಿಡಿದು ನಾಗರಾಜು ಕಾಂಗ್ರೆಸ್ ಸೇರಿದ್ದರು ಎಂಬ ಹೇಳಿಕೆ ರುಜುವಾತು ಮಾಡಬೇಕು. ಕಾಂಗ್ರೆಸ್ ಬ್ಯಾನರ್ ಕೆಳಗೆ ಎಲ್ಲಿ ಪಕ್ಷ ಸೇರಿದ್ದರು ಅಂತ ತೋರಿಸಬೇಕು. ಹೀಗೆ ಮನಬಂದಂತೆ ಹೇಳಿಕೆ ನೀಡುತ್ತಾ ಜೆಡಿಎಸ್ ಕಾರ್ಯಕರ್ತರ ತಾಳ್ಮೆ ಪರೀಕ್ಷೆ ಮಾಡಿರುವುದು ಸರಿಯಲ್ಲ ಎಂದು ಎಚ್ಚರಿಸಿದ ಅವರು ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಮೂಲಕವೇ ಶಾಸಕರಾಗಿ ಗೆದ್ದು ಎರಡು ಖಾತೆ ಸಚಿವರಾಗಿ ನಂತರ ಕುಮಾರಸ್ವಾಮಿ ಅವರನ್ನೇ ಟೀಕಿಸಿ ದ್ರೋಹವೆಸಗಿದ್ದು ಸರಿಯೇ ಜೊತೆಗೆ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಮತ ನೀಡಿದ್ದು ಸರಿಯೇ, ಇಪ್ಪತ್ತು ವರ್ಷಗಳಿಂದ ಶಾಸಕರಾಗಿ ಸಿಎಂ ಬೊಮ್ಮಾಯಿ ಅವರಿಗೆ ಹಿಂದುಳಿದ ತಾಲ್ಲೂಕು ಎಂದು ಪತ್ರ ಬರೆದಿದ್ದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಗುಡುಗಿದ ಅವರು ಲಿಂಗಾಯಿತ ಸಮುದಾಯದ ಅಭ್ಯರ್ಥಿಗಳನ್ನು ಸೋಲಿಸಲು ಪಣ ತೊಡುವ ನಿನ್ನ ಯೋಗ್ಯತೆ ಇಡೀ ಕ್ಷೇತ್ರವೇ ಹೇಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ನಲ್ಲಿದ್ದುಕೊಂಡು ಜಿಪಂ ಚುನಾವಣೆಯಲ್ಲಿ ಕಡಬದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಪರ ಮತ ಕೇಳಿ ಲಿಂಗಾಯಿತ ಸಮುದಾಯದ ಹಾರನಹಳ್ಳಿ ಪ್ರಭಣ್ಣ ಅವರಿಗೆ ಮೋಸ ಮಾಡಿದ್ದ ನೀನು ನಿಟ್ಟೂರು ಕ್ಷೇತ್ರದಲ್ಲಿ ಆರೆಸ್ಸಸ್ ಕಾರ್ಯಕರ್ತ ನಾನು ಎಂದು ಬಿಜೆಪಿಯ ನವ್ಯಾ ಬಾಬು ಅವರಿಗೆ ಮತ ಕೇಳಿದ್ದ ಸಾಕ್ಷಿ ನನ್ನ ಬಳಿ ಇದೆ. ಇಲ್ಲಿ ಜೆಡಿಎಸ್ ಗೆ ವಿರೋಧಿಸಿ ಶಾಸಕರ ಪತ್ನಿ ಭಾರತಿ ಶ್ರೀನಿವಾಸ್ ಅವರ ಬೆನ್ನಿಗೆ ಚೂರಿ ಹಾಕಿದ್ದು ಭೂಪ ನೀನಲ್ಲವೇ ಎಂದು ಪ್ರಶ್ನಿಸಿದ ಅವರು ಶಾಸಕರು ಇನ್ನೂ ಜೆಡಿಎಸ್ ನಲ್ಲಿದ್ದು ಕಾಂಗ್ರೆಸ್ ಚಿಹ್ನೆಯ ಸ್ಟಿಕ್ಕರ್ ಮನೆ ಮನೆಗೆ ಅಂಟಿಸಿ ಮತ ಕೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗುಡುಗಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಪ್ಪ, ಸಲೀಂ ಪಾಷ, ನಾಗಸಂದ್ರ ವಿಜಯ್ ಕುಮಾರ್, ಗ್ರಾಪಂ ಸದಸ್ಯ ತೋಫಿಕ್ ಅಹಮದ್, ಡಿ.ರಘು ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.