ಮಾರಶೆಟ್ಟಿ ಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಎ.ಬಿ.ಶಿವಸ್ವಾಮಿ (ಎನ್.ಎಸ್.ಜಗದೀಶ್ ಬೆಂಬಲಿತ) 12 ಮತ ಪಡೆದು ಭರ್ಜರಿ ಗೆಲುವು.

ಗುಬ್ಬಿ: ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಮತ ಪಡೆದು ಎನ್.ಎಸ್.ಜಗದೀಶ್ ಬೆಂಬಲಿತ ಅಭ್ಯರ್ಥಿ ಅತ್ತಿಕಟ್ಟೆ ಎ.ಬಿ.ಶಿವಸ್ವಾಮಿ ಭರ್ಜರಿ ಗೆಲುವು ಸಾಧಿಸಿದರು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಎ.ಬಿ.ಶಿವಸ್ವಾಮಿ ಹಾಗೂ ಪ್ರಸಾದ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಆರಂಭವಾಗಿ 12 ಮತಗಳನ್ನು ಪಡೆದ ಶಿವಸ್ವಾಮಿ ಎರಡು ಮತಗಳ ಅಂತರದಲ್ಲಿ ಜಯ ಸಾಧಿಸಿದರು. ಪ್ರತಿಸ್ಪರ್ಧಿ ಪ್ರಸಾದ್ 10 ಮತಗಳನ್ನು ಪಡೆದು ಪರಾಜಿತಗೊಂಡರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ನೂತನ ಅಧ್ಯಕ್ಷ ಎ.ಬಿ.ಶಿವಸ್ವಾಮಿ, ನನಗೆ ಬೆಂಬಲ ಸೂಚಿಸಿ ಗೆಲುವು ತಂದು ಕೊಟ್ಟ ಎಲ್ಲಾ ಸದಸ್ಯರ ಒಮ್ಮತದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತೇನೆ. ವಿಶ್ವದ ದೊಡ್ಡ ಎಚ್.ಎ.ಎಲ್ ಘಟಕ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣವಾಗಿದ್ದು ಇಡೀ ರಾಜ್ಯವೇ ಇತ್ತ ಕಡೆ ಗಮನಿಸುವ ಕಾರಣ ಮಾದರಿ ಪಂಚಾಯಿತಿ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮುಖಂಡ ಎನ್.ಎಸ್.ಜಗದೀಶ್ ಮಾತನಾಡಿ ತಾಲ್ಲೂಕಿನಲ್ಲಿ ಮಾದರಿ ಗ್ರಾಮ ಪಂಚಾಯಿತಿ ಮಾರಶೆಟ್ಟಿಹಳ್ಳಿ ವ್ಯಾಪ್ತಿಯ ಎಲ್ಲಾ ಮುಖಂಡರು ಶಿವಸ್ವಾಮಿ ಗೆಲುವಿಗೆ ಸಹಕರಿಸಿದ್ದಾರೆ. ಅಭಿವೃದ್ದಿ ಮಾಡುವ ಹುಮ್ಮಸ್ಸು ಇರುವವರಿಗೆ ಸಾಥ್ ನೀಡುವ ಕೆಲಸ ಮಾಡಿದ್ದೇವೆ. ಮುಂದಿನ ದಿನದಲ್ಲಿ ಯಾವುದೇ ಬೇಧಭಾವ ಇಲ್ಲದೆ ಎಲ್ಲಾ ಸದಸ್ಯರ ಸಹಕಾರ ಪಡೆದು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಿ ಎಂದು ಆಶಿಸಿದರು.

ಮುಖಂಡ ಲಕ್ಷ್ಮಿಪತಿ ಮಾತನಾಡಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಹಿತ ಬಯಸಿದ ಎನ್.ಎಸ್.ಜಗದೀಶ್ ಅವರು ಎಲ್ಲರ ಒಗ್ಗೂಡಿಸಿ ಶಿವಸ್ವಾಮಿ ಅವರನ್ನು ಆಯ್ಕೆ ಮಾಡಲು ಮುಂದಾದರು. ಅವರ ಒತ್ತಾಸೆಯಂತೆ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆ ತರುವ ಕೆಲಸ ಶಿವಸ್ವಾಮಿ ಮಾಡಲಿದ್ದಾರೆ ಎಂದರು.

ದಲಿತ ಮುಖಂಡ ನಿಟ್ಟೂರು ಗಂಗರಾಂ ಮಾತನಾಡಿ ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಿಗೆ ತಂದು ಜಾತ್ಯತೀತ ನಿಲುವು ತಾಳಿರುವ ಜಗದೀಶ್ ಇಂದಿಗೂ ಜಾತಿ ಎಂಬ ಮಾತುಗಳನ್ನು ಆಡಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಇಡೀ ಪಂಚಾಯಿತಿಯ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷರು ಸದಸ್ಯರು ನಡೆದುಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ತಾಪಂ ಮಾಜಿ ಸದಸ್ಯ ದೇವರಾಜ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್ ಬಾಬು, ಅಮ್ಮನಹಳ್ಳಿ ಬಸವರಾಜು, ಸಿದ್ದಲಿಂಗಮೂರ್ತಿ, ನಾಗೇಶ್, ಮೋಹನ್ ಕುಮಾರ್, ನರಸಿಂಹಮೂರ್ತಿ, ಸಂತೋಷ್ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!