ಗುಬ್ಬಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಅದ್ದೂರಿ ರಥೋತ್ಸವ : ಹರಿದು ಬಂದ ಭಕ್ತ ಸಾಗರ.

ಗುಬ್ಬಿ: ಇತಿಹಾಸ ಪ್ರಸಿದ್ಧ ಗುಬ್ಜಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ವಿಜೃಂಭಣೆಯ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕೈಂಕರ್ಯ ನಡೆದು ಸ್ವಾಮಿ ಅವರಿಗೆ ಮಾಡಿದ ವಿಶೇಷ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ನಂತರ ಹೂವಿನ ಪಲ್ಲಕ್ಕಿಯಲ್ಲಿ ಸ್ವಾಮಿಯವರನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ 1-45 ಕ್ಕೆ ಸರಿಯಾಗಿ ಗುಬ್ಬಿಯಪ್ಪ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ಕೋವಿಡ್ ಎನ್ನುವ ಕರಿ ನೆರಳಿನಿಂದ ಹೊರಬಂದ ಭಕ್ತ ಸಾಗರ ಎಲ್ಲಾ ಆತಂಕ ಮರೆತು ಸಾಗರೋಪಾದಿ ಹರಿದು ಬಂದರು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ ರಥೋತ್ಸವಕ್ಕೆ ಬಾಳೆಹಣ್ಣು ದವನ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ನವ ದಂಪತಿಗಳು ಹರಕೆ ಸಲ್ಲಿಸುವ ವಿಶೇಷ ಪದ್ದತಿ ಸಹ ಇಲ್ಲಿ ನಡೆಯುತ್ತದೆ. ಬೆಳಿಗ್ಗೆಯಿಂದ ತಯಾರಿ ನಡೆಸಿದ ವಿವಿಧ ಸಂಘಸಂಸ್ಥೆಗಳು ಬಿಸಲಿನಿಂದ ಬಳಲಿದ ಭಕ್ತರಿಗೆ ಪಾನಕ ಫಲಹಾರ ವಿತರಿಸಿ ತಮ್ಮ ಭಕ್ತ ಸಮರ್ಪಿಸಿದರು. ಮತ್ತೇ ಕೆಲವರು ಉಪಹಾರ ವ್ಯವಸ್ಥೆ ಮಾಡಿದ್ದರು. ಬಿಸಿಲ ಝಳಕ್ಕೆ ಕುಡಿಯಲು ಮಜ್ಜಿಗೆ ಪಾನಕ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿದ ದಾಸೋಹ ಸಮಿತಿ ಎರಡು ದಿನದಿಂದ ಹಗಲಿರುಳು ಶ್ರಮಿಸಿ ಸಾವಿರಾರು ಭಕ್ತರಿಗೆ ಬಫೆ ಮೂಲಕ ಅನ್ನ ಸಂತರ್ಪಣೆ ನಡೆಸಿದರು. ಈ ಕಾರ್ಯಕ್ಕೆ ಹಲವು ಭಕ್ತರು ದೇಣಿಗೆಯನ್ನು ದವಸ ಧಾನ್ಯದ ರೂಪದಲ್ಲೂ ನೀಡಿದ್ದಾರೆ. ಎಲ್ಲಾ ವ್ಯವಸ್ಥಿತವಾಗಿ ಆಯೋಜಿಸಿದ ಸಮಿತಿ ದೇವಾಲಯದಲ್ಲೂ ವಿಶೇಷ ಅಲಂಕಾರ ಮಾಡಿದೆ. 18 ಕೋಮಿನ ಸಹಕಾರದಲ್ಲಿ ದೇವಾಲಯ ಹಾಗೂ ಹೊರಾಂಗಣ ಹೂವಿನಿಂದ ಅಲಂಕೃತ ಗೊಳಿಸಲಾಗಿತ್ತು. ಈ ನಡುವೆ ರಥೋತ್ಸವಕ್ಕೆ ಭಕ್ತರು ಎಸೆದ ದವನ ಬಾಳೆಹಣ್ಣು ಮೇಲೆ ಭಕ್ತರು ತಮ್ಮ ಹರಕೆಯನ್ನು ಬರೆದು ಎಸೆದು ಹೊಸ ರೀತಿ ತಮ್ಮ ಭಕ್ತಿ ವ್ಯಕ್ತಪಡಿಸಿದ್ದು ಮತ್ತೊಂದು ವಿಶೇಷವಾಗಿ ಕಾಣಿಸಿಕೊಂಡಿತು.

ರಥೋತ್ಸವ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾತ್ರೆಯಲ್ಲಿ ಪಾಲ್ಗೊಂಡರು. ದೇವಾಲಯ ಆಡಳಿತ ಮಂಡಳಿ ಹಾಗೂ ಹದಿನೆಂಟು ಕೋಮಿನ ಮುಖಂಡರ ನೇತೃತ್ವದಲ್ಲಿ ಸಕಲ ವ್ಯವಸ್ಥೆ ಮಾಡಲಾಯಿತು.

ವರದಿ: ಹರಿಪ್ರಿಯ ರಮೇಶ್ ಗೌಡ,, ಗುಬ್ಬಿ.

You May Also Like

error: Content is protected !!