ಗುಬ್ಬಿ: ಪ್ರಸಕ್ತ ಸಾಲಿನ ಆಯವ್ಯಯ ಅಂದಾಜು ಪಟ್ಟಿ ಸಿದ್ಧಪಡಿಸಿ ಆದಾಯ ಹಾಗೂ ವೆಚ್ಚದ ಅಂದಾಜು ಸದಸ್ಯರ ಸಮ್ಮುಖದಲ್ಲಿ ಓದಿದ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ 33.30 ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ನಿರೀಕ್ಷೆ ಇರುವ ಆದಾಯ ಘೋಷ್ವರೆ 28.05 ಕೋಟಿ ರೂಗಳ ಪಟ್ಟಿಯಲ್ಲಿ 27.72 ಕೋಟಿ ವೆಚ್ಚವನ್ನು ಅಂದಾಜು ಸಿದ್ದ ಪಡಿಸಿ 33.30 ಕೋಟಿ ರೂಗಳ ಉಳಿತಾಯವನ್ನು ಸರ್ವ ಸದಸ್ಯರ ಮುಂದೆ ಮಂಡಿಸಿದರು.
ಪ್ರಾರಂಭಿಕ ಶಿಲ್ಕು 8.76 ರೂಗಳ ಜತೆ 19.28 ಕೋಟಿ ರೂಗಳನ್ನು ಒಗ್ಗೂಡಿಸಿ 28.05 ಕೋಟಿ ಆದಾಯದಲ್ಲಿ ಅವಶ್ಯ ಮೂಲಭೂತ ಕೆಲಸಗಳಿಗೆ ಮೀಸಲಿಟ್ಟು ಜನಪರ ಕೆಲಸ ಮಾಡಲಾಗುವುದು. ರಸ್ತೆಗಳ ಅಭಿವೃದ್ಧಿಗೆ 12.87 ಕೋಟಿ ಬಳಕೆ ಮಾಡಲಾಗಿ ಕುಡಿಯುವ ನೀರಿನ ವ್ಯವಸ್ಥೆಗೆ 1.60 ಕೋಟಿ ಮೀಸಲು ಇಡಲಾಗುತ್ತಿದೆ. ವಿಶೇಷವಾಗಿ ಘನ ತ್ಯಾಜ್ಯ ವಿಲೇವಾರಿ ಯಂತ್ರೋಪಕರಣ ಖರೀದಿಗೆ 1.30 ಕೋಟಿ ನೀಡಲಾಗುವುದು ಎಂದು ವಿವರಿಸಿದ ಅವರು ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ವಿಶೇಷ ಅನುದಾನ ಕಾಮಗಾರಿ ನಡೆದಿದೆ ಎಂದರು.
ಮೂರನೇ ಬಜೆಟ್ ಯಶಸ್ವಿಯಾಗಿ ಮಂಡಿಸಿ ಪಟ್ಟಣದ ನಿವಾಸಿಗಳಿಗೆ ಅವಶ್ಯ ವ್ಯವಸ್ಥೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಜೆಟ್ ಸಿದ್ಧಪಡಿಸುವ ಮುನ್ನ ಸಾರ್ವಜನಿಕರ ಹಾಗೂ ಜನ ಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಅನುಸರಿಸಿ ಪಟ್ಟಿ ಸಿದ್ದಪಡಿಸಲಾಗಿದೆ. ವಿರೋಧ ಪಕ್ಷದ ಸದಸ್ಯರು ಸಹ ಒಪ್ಪಿದ ಬಜೆಟ್ ಇದಾಗಿದೆ ಎಂದು ತಿಳಿಸಿದ ಅವರು ಬಜೆಟ್ ಕುರಿತ ಪೂರ್ವಭಾವಿ ಸಭೆಯಲ್ಲಿ ಗಂಭೀರ ವಿಚಾರ ಚರ್ಚೆಗೆ ಬಂದಿದ್ದು, ಸಾಕಷ್ಟು ಹೊಸ ಕಾರ್ಯಕ್ರಮ ರೂಪಿಸಲು ಅನುವಾಯಿತು ಎಂದು ಸಲಹೆ ಸೂಚನೆ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಮುಖ್ಯಾಧಿಕಾರಿ ಮಂಜುಳಾದೇವಿ, ಕಂದಾಯ ನಿರೀಕ್ಷಕ ನಾಗೇಶ್, ಇಂಜಿನಿಯರ್ ಬಿಂದುಸಾರ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.